ಲೇಖನ
ಮುಖ್ಯ ಪುಟ » ಮನರಂಜನೆ » ಯಕ್ಷಗಾನ » ಲೇಖನ » ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 3- ನಜ್ಜು ಗುಜ್ಜಾಗುವ ಪ್ರಹ್ಲಾದ... (Yakshagana | Kuriya Vittala Shastri | Biography | Bannada Baduku | Yakshagana Article in Kannada | Kannada Website)
ಹಿಂದಿನದು|ಮುಂದಿನದು
[ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ]

(ಹಿಂದಿನ ವಾರದಿಂದ ಮುಂದುವರಿದಿದೆ)

ಮನೆಯಲ್ಲೊಂದು ದಿನ ಯಾವುದೋ ಶುಭಕಾರ್ಯ ನಿಮಿತ್ತ ನೆರೆಕರೆಯವರು ಸೇರಿದ್ದರು. ನಮ್ಮ ಊರಿನತ್ತ ಯಾವುದೇ ಕಾರ್ಯಕ್ಕಾಗಿ ಭೇಟಿ ಕೊಟ್ಟರೆ 'ಉಂಡೊಡನೆ ಊರು ಬಿಡುವ' ಕ್ರಮವಿರುವುದಿಲ್ಲ.

WD
ಆ ದಿನ ಸಂಜೆಯ ಹೊತ್ತಿಗೆ ತೆರಳುವವರು ತೆರಳಿದ ತರುವಾಯವೂ, ಕೆಲವರು ಸಮೀಪದವರು ಉಳಿದಿದ್ದರು. ಬಂಧುಗಳೂ ಇದ್ದರು.

ಊರಿನ ಹಲವು ಸಮಸ್ಯೆಗಳ, ಜನರ ನಡೆನುಡಿಯ ವಿಚಾರಗಳ ಚರ್ಚೆ ಮಾತುಕತೆಗಳಲ್ಲಿ ಆಗುತ್ತಿತ್ತು. ಅಂತೆಯೇ ಮಾತು ಮುಂದುವರಿದು ತಾಳಮದ್ದಳೆಯ ಕಡೆಗೂ ತಿರುಗಿತು. ಬರಿಯ ಮಾತಿನಿಂದ ಪಾತ್ರ ಪೋಷಣೆಯಾಗುವುದಿಲ್ಲ, ಸಜೀವ ಚಿತ್ರಣವಾಗುವುದಿಲ್ಲ ಎಂದು ಒಬ್ಬರು ಹೇಳಿದರು.

''ಪಾತ್ರ ಚಿತ್ರಣ ಬೇಕಾದರೆ ಬಯಲಾಟವನ್ನೇ ನೋಡಬೇಕು'' ಎಂದರು ಇನ್ನೊಬ್ಬರು.

ಮಳೆಗಾಲ ಕಳೆದಿದ್ದು, ಮೇಳಗಳು ಹೊರಡುವುದಕ್ಕೆ ಇನ್ನೂ ಸಮಯವಿದ್ದುದಾಗಿ ನನ್ನ ನೆನಪು.

''ಅದಕ್ಕೆ ಬಯಲಾಟವೇ ಆಗಬೇಕೆಂದು ಏನು? ಅಭಿನಯದ ಸಾಮರ್ಥ್ಯವಿದ್ದರೆ, ಅತ್ಯುತ್ತಮ ಪಾತ್ರ ನಿರೂಪಣೆ ನಮ್ಮ ಕೈಯಿಂದಲೂ ಸಾಧ್ಯವಿದೆ!'' ಎಂದರು ತಂದೆಯವರು.

Dharmastala Kshetra Mahatme
WD
''ಅದು ಹೇಗೆ?''

''ನಾನು ಎಣಿಸಿರುವ ಪ್ರಯೋಗಗಳನ್ನು ಇಂದು ಮಾಡಿ ನೋಡೋಣ'' ಎಂಬ ಉತ್ತರ ಅವರಿಂದ ಬಂದಿತು.

ಅಂದಿನ ರಾತ್ರಿಯೇ, ಇದು ಸುಧಾರಣೆಯ ಒಂದು ಕ್ರಮವೆಂದು ಹೇಳಿಸಿಕೊಳ್ಳುವ 'ಯಕ್ಷಗಾನ ನಾಟಕ'ದ ಮೊದಲ ಪ್ರಯೋಗ ನಮ್ಮಲ್ಲಾಯಿತು.

ನೆಲದಿಂದ ಮೂರಡಿ ಎತ್ತರಕ್ಕಿರುವ- ಸುಮಾರು ಐವತ್ತು ಅಡಿ ಉದ್ದ, ಆರು ಅಡಿ ಅಗಲದ- ನಮ್ಮ ಮನೆಯ ಜಗಲಿ, ಅಂದಿನ ನಾಟಕ ಶಾಲೆಯಾಯಿತು. ಸೀರೆಗಳ ಸಂಗ್ರಹದಿಂದ ಪರದೆಗಳು ತಯಾರಾದುವು.

ಪ್ರಸಂಗದ ಆಯ್ಕೆ, ಪಾತ್ರ ವಿತರಣೆಗಳೂ, ಮನೆಗೆ ಬಂದು ಉಳಿದಿದ್ದ ಸಾಕಷ್ಟು ಮಂದಿ ಕಲಾಸಕ್ತರಿಂದಾಗಿ ಸುಲಭದಲ್ಲೇ ಆದುವು. ಮೃದಂಗ-ಚೆಂಡೆ-ಜಾಗಟೆಗಳನ್ನು ಒದಗಿಸಿಕೊಳ್ಳುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ.

ವೇಷಭೂಷಣಗಳಿಗಾಗಿ ನಮ್ಮೆಲ್ಲ ಬುದ್ಧಿಶಕ್ತಿಯನ್ನು ವೆಚ್ಚ ಮಾಡಬೇಕಾದ ಸಂದರ್ಭ ಬರಲಿಲ್ಲವೆನ್ನಿ. ಸೀತಾಪಹಾರದ ಕಥಾನಕವನ್ನೊಳಗೊಂಡಿದ್ದ (ಪಾರ್ತಿಸುಬ್ಬನವರ) ''ಪಂಚವಟಿ'' ಪ್ರಸಂಗವಾದ ಕಾರಣ, ರಾವಣನ ಪಾತ್ರಕ್ಕೆ ಕೂಡಾ ವೇಷಭೂಷಣಗಳ ಅರಸುವಿಕೆ ಅಗತ್ಯವಾಗಲಿಲ್ಲ.

ದೇಹ ಗಾತ್ರದಲ್ಲಿ ಕುಳ್ಳನಾಗಿದ್ದ ನನ್ನ ಪಾಲಿಗೆ ಸೀತೆಯ ಪಾತ್ರ ಬಂದಿತು.

ನಾವೆಲ್ಲ ಪಾತ್ರಧಾರಿಗಳೂ, ಸಂಪ್ರದಾಯಕ್ಕೆ ಅನುಗುಣವಾಗಿ ಶಿಖೆಯನ್ನು ಧರಿಸಿದ್ದವರು. ನನ್ನ ಕೂದಲು ತುರುಬು ಬಿಡಲಾಗುವಷ್ಟು ಇತ್ತು. ಸ್ತ್ರೀ ಪಾತ್ರ ನಿರ್ವಹಣೆ ಕಷ್ಟವಾಗಿರಲಿಲ್ಲ. ಜಟಾವಲ್ಕಲಧಾರಿಗಳಾದ ರಾಮ ಲಕ್ಷ್ಮಣರಿಗೂ 'ಟೋಪನ್' ಅಗತ್ಯ ಬೀಳಲಿಲ್ಲ.

ಅದುವರೆಗೂ, ತಾಳಮದ್ದಳೆಗಳಲ್ಲಿ ಮಾತು ಸರಾಗವಾಗಿ ಬಂದರೆ ಸಾಕಾಗಿತ್ತು. ಉಳಿದ ಅಂಗಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ಅಂದು, ಅಡಿಯಿಂದ ಮುಡಿಯವರೆಗೂ ನನ್ನ ಅಂಗಾಂಗಗಳನ್ನು ನಿಯಂತ್ರಿಸಿ - ಸಭೆಗೆ ಬೆನ್ನು ತೋರಬಾರದು ಎಂಬಿತ್ಯಾದಿ ನಾಟಕದ ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡು, ನನ್ನಿಂದಲೂ ಹಿರಿಯರಾದ ರಾಮನ ಪಾತ್ರಧಾರಿಯ ಎದುರು ಅಪಚಾರವಾಗದಂತೆ ಅಭಿನಯಿಸಲು ನನ್ನೆಲ್ಲ ಸಾಹಸವನ್ನೂ ಉಪಯೋಗಿಸಬೇಕಾಯಿತು. ಮನೆಯಂಗಳದಲ್ಲಿ ಹಾಕಲಾಗಿದ್ದ ತೆಂಗಿನ ಸೋಗೆ, ಚಾಪೆಗಳ ಮೇಲೆ ಕುಳಿತಿದ್ದವರೆಲ್ಲ ಪರಿಚಿತರು. ಆದುದರಿಂದ ಹೊಸ ಸಭೆಯ ಅಳುಕಿನ, ಜನ ಸಮೂಹದ ಸಭಾಕಂಪನದ ಬೆದರಿಕೆ ಇರಲಿಲ್ಲ. ಆದರೆ, ಸೇರಿದ ಸಮೀಪದವರಲ್ಲೇ ಪ್ರತಿ ವಾಕ್ಯದ ಒಂದೊಂದು ಸನ್ನಿವೇಶದ ವಿಮರ್ಶೆಯನ್ನು ಎಳೆಎಳೆಯಾಗಿ ಮಾಡಬಲ್ಲವರೂ ಇದ್ದ ಕಾರಣ ನಾನೆಲ್ಲೂ ಎಚ್ಚರ ತಪ್ಪುವಂತಿರಲಿಲ್ಲ.
ಹಿಂದಿನದು|ಮುಂದಿನದು
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯಕ್ಷಗಾನ, ಕುರಿಯ ವಿಠಲ ಶಾಸ್ತ್ರಿ, ಆತ್ಮಕಥನ, ಬಣ್ಣದ ಬದುಕು, ಪದ್ಯಾಣ ಗೋಪಾಲಕೃಷ್ಣ, ಪಗೋ, ಕನ್ನಡ ಯಕ್ಷಗಾನ, ಕನ್ನಡ ವೆಬ್ ಸೈಟ್, ಕನ್ನಡ ಲೇಖನ, ಕರ್ನಾಟಕ ಕಲೆ, ಕನ್ನಡ ಲೇಖನಗಳು, ಯಕ್ಷಗಾನ ಲೇಖನ