ಆನ್ಲೈನ್ ಹಣ ಹೂಡಿಕೆ ಮಾಡೋ ಮುನ್ನ ಎಚ್ಚರ!

Bangalore| Ramya kosira| Last Modified ಮಂಗಳವಾರ, 20 ಜುಲೈ 2021 (19:46 IST)
ಬೆಂಗಳೂರು: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನೂರಾರು ಜನರನ್ನು ವಂಚಿಸಿದ್ದ ಚೀನಿ ಆ್ಯಪ್ ಇದೀಗ ಮತ್ತೊಬ್ಬ ವ್ಯಕ್ತಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೈಲೈಟ್ಸ್:
•             ಆನ್ಲೈನ್ ಹಣ ಹೂಡಿಕೆ ಮಾಡಿದ ವ್ಯಕ್ತಿಗೆ ಟೋಪಿ ಹಾಕಿದ ವಂಚಕರು
•             ಬೆಂಗಳೂರಿನ ವ್ಯಕ್ತಿಗೆ ಆನ್ಲೈನ್ನಲ್ಲಿ ಲಕ್ಷಾಂತರ ರೂಪಾಯಿ ವಂಚನೆ
•             ಝಿಪ್ಬಿಟ್ ಮೊಬೈಲ್ ಆ್ಯಪ್ ಮೂಲಕ ಮನಿಷ್ ಮಿಶ್ರಾಗೆ ಮೋಸ
ವೈಟ್ಫೀಲ್ಡ್ ಮೈತ್ರಿ ಲೇಔಟ್ ನಿವಾಸಿ ಮನಿಷ್ ಮಿಶ್ರಾ (46) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಸನಯ ಮತ್ತು ಟೀಚರ್ಲೈ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ವೈಟ್ಫೀಲ್ಡ್ ಉಪವಿಭಾಗದ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮನಿಷ್ಗೆ ಕರೆ ಮಾಡಿದ ಆರೋಪಿಗಳು, ಕ್ಯಾಷ್ಫ್ರೀ ಬೆಂಗಳೂರು ಎಂಬ ಕಂಪನಿ ಝಿಪ್ಬಿಟ್ ಮೊಬೈಲ್ ಆ್ಯಪ್ ಹೊರ ತಂದಿದೆ. ಈ ಹೂಡಿಕೆ ಆ್ಯಪ್ನಲ್ಲಿ ಹಣ ತೊಡಗಿಸಿದರೆ ಅಧಿಕ ಲಾಭ ಬರಲಿದೆ ಎಂದು ನಂಬಿಸಿದ್ದರು. ಹೆಚ್ಚಿನ ಲಾಭದ ಆಸೆಯಿಂದ ಆರಂಭದಲ್ಲಿ1.75 ಲಕ್ಷ ರೂ.ಅನ್ನು ಝಿಪ್ಬಿಟ್ ಆ್ಯಪ್ನಲ್ಲಿ ಮನಿಷ್ ಹೂಡಿಕೆ ಮಾಡಿದ್ದರು. ಇದಾದ ಕೆಲವೇ ದಿನಕ್ಕೆ ಆ್ಯಪ್ನಲ್ಲಿ ಪರಿಶೀಲಿಸಿದಾಗ ಹೂಡಿಕೆ ಮೊತ್ತ 9.43 ಲಕ್ಷ ರೂ.ಗೆ ಏರಿಕೆಯಾಗಿತ್ತು. ಅದನ್ನು ವಾಪಸ್ ಪಡೆಯಲು ಮನಿಷ್ ಮುಂದಾದರು.
ಕಂಪನಿ ಅಧಿಕಾರಿಗೆ ಕರೆ ಮಾಡಿ ಹೂಡಿಕೆ ಹಣ ವಾಪಸ್ ಪಡೆಯುವುದಾಗಿ ಹೇಳಿದಾಗ ಮತ್ತೆ 1 ಲಕ್ಷ ರೂ. ಶುಲ್ಕ ಪಾವತಿ ಮಾಡಬೇಕೆಂದು ಸೂಚಿಸಿದ್ದರು. ಆದರೆ, ಇದಕ್ಕೆ ಮನಿಷ್ ಒಪ್ಪದೆ ಇದ್ದಾಗ ಆರೋಪಿಗಳು ಝಿಪ್ಬಿಟ್ ಆ್ಯಪ್ನ್ನು ಸ್ಥಗಿತ ಮಾಡಿ ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಸಂಪರ್ಕ ಸಿಗದೆ ಇದ್ದಾಗ ನೊಂದ ಮನಿಷ್, ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಠಾಣೆಗೆ ದೂರು ನೀಡಿದ್ದಾರೆ. ಇದು ಚೀನಿ ಆ್ಯಪ್ ಮಾದರಿ ಆಗಿದ್ದು, ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
 
ಇದರಲ್ಲಿ ಇನ್ನಷ್ಟು ಓದಿ :