Widgets Magazine

ಬಂಗಾರ್ ಏನ್ ಮಹಾನ್ ನಾಯಕನೇನ್ರಿ: ಚಂದ್ರಶೇಖರ

ಶಿವಮೊಗ್ಗ| ನಾಗೇಂದ್ರ ತ್ರಾಸಿ|
ಕಾಗೋಡು ತಿಮ್ಮಪ್ಪ ಯಾವ ಸೀಮೆ ನಾಯಕನ್ರೀ. ಯಾವ ಮಹಾ ದೊಡ್ಡ ಲೀಡರ್ರೀ. ನನ್ ಜಿಲ್ಲೆಗೆ ನಾನೇ ನಾಯಕ, ಬೇರಾರು ಅಲ್ಲ. ಒಂದು ವೇಳೆ ನಾಯಕ ಎಂಬುವವರಿದ್ದರೆ ಅದು ಕುಮಾರ ಬಂಗಾರಪ್ಪ ಮಾತ್ರ... ಹೀಗೆ ವಾಗ್ದಾಳಿ ನಡೆಸಿರುವವರು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಎಚ್.ಎಂ.ಚಂದ್ರಶೇಖರಪ್ಪ.

ಮಾಜಿ ಮುಖ್ಯಮಂತ್ರಿ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ನಾನು ಲಿಂಗಾಯಿತರ ವಿರೋಧಿ ಅಲ್ಲ ಎಂದು ಇತ್ತೀಚೆಗೆ ನೀಡಿರುವ ಹೇಳಿಕೆ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಬಂಗಾರಪ್ಪ ಮತ್ತು ಕಾಗೋಡು ವಿರುದ್ಧ ಕಿಡಿಕಾರಿದರು.

ನನ್ನ ಜಿಲ್ಲೆಗೆ ನಾನೇ ನಾಯಕ. ಬೇರಾರು ಅಲ್ಲ. ಅವರು ಹೇಳಿದ್ದಕ್ಕೆಲ್ಲಾ ಜೈ ಅನ್ನಲು ಜನರೇನು ಕುರಿಗಳ. ಹಾಗೆ ನೋಡಿದರೆ ಬಂಗಾರಪ್ಪ ಅವರನ್ನು ಈ ಹಿಂದೆ ಚುನಾವಣೆಯಲ್ಲಿ ಗೆಲ್ಲಿಸಿದ್ದು ನಾನೇ. ಈಗ ಬಂಗಾರಪ್ಪ ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಹೋದರೆ ಹೋಗಲಿ. ಅದರಿಂದ ಕಾಂಗ್ರೆಸ ಪಕ್ಷಕ್ಕೆ ನಷ್ಟವಿಲ್ಲ. ಆದರೆ ಮತ್ತೆ ಅವರನ್ನು ಕರೆತರಬಾರದು ಎಂದು ಸಲಹೆ ನೀಡಿದರು.

ಈ ಊರಿಗೆ ನಾನೇ ನಾಯಕ. ಇಂದಿರಾಗಾಂಧಿಯನ್ನು ಗೆಲ್ಲಿಸಿದ ಕುಟುಂಬ ನಮ್ಮದು. ಹೀಗಿರುವಾಗ ಬೆಂಗಳೂರಿನಿಂದ ತಂದು ಹಾಕುವ ಅಗತ್ಯವೇನಿತ್ತು. ಇನ್ನು ಕಾಗೋಡು ತಿಮ್ಮಪ್ಪ. ಅವರೊಬ್ಬ ನಾಯಕರಾ. ಜಿ.ಪಂ. ಮತ್ತು ತಾ.ಪಂ.ಚುನಾವಣೆಗೆ ಸಂಬಂಧಿಸಿದ ಟಿಕೇಟ್ ಹಂಚಿಕೆಯಲ್ಲಿ ನನ್ನನ್ನೂ ಸೇರಿದಂತೆ ಮಾಜಿ ಶಾಸಕರಾದ ಡಾ.ಜಿ.ಡಿ.ನಾರಾಯಣಪ್ಪ ಮತ್ತು ಬಿ.ಸ್ವಾಮಿರಾವ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.


ಇದರಲ್ಲಿ ಇನ್ನಷ್ಟು ಓದಿ :