ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ

bangalore| geetha| Last Modified ಸೋಮವಾರ, 11 ಅಕ್ಟೋಬರ್ 2021 (21:58 IST)
ಬೆಂಗಳೂರು: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಮೀನುಗಳಿಗೆ ನೀರು ನುಗ್ಗಿದ್ದು ಬೆಳೆ ನಾಶವಾಗಿದೆ.
ಬಂಗಾಳ ಕೊಲ್ಲಿಯಲ್ಲಿ  ವಾಯುಭಾರ ಕುಸಿತ ಉಂಟಾಗಿರುವುದರಿಂದ ಎರಡು ದಿನಗಳ ಕಾಲ ವರುಣಾರ್ಭಟ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ನಿರಂತರವಾಗಿ ಮುಂದುವರಿದೆ.ಈ ಹಿನ್ನೆಲೆಯಲ್ಲಿ ಜಮೀನು, ಮನೆಗಳಿಗೆ ನೀರು ನುಗ್ಗಿ ಜನರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಎಕರೆ ಬೆಳೆಗೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ಕಾಡಂಚಿನ ಗದ್ದೇರಹಟ್ಟಿ ಗ್ರಾಮದ ಏಕೈಕ ರಸ್ತೆಯ ಸಂಪರ್ಕ ಹಳ್ಳದ ಹಿನ್ನೀರಿನಿಂದಾಗಿ ಕಡಿತಗೊಂಡಿದೆ. ಸಿಡಿಲು ಬಡಿದು ಕೊಪ್ಪಳದಲ್ಲಿ ಒಂದು ಎಮ್ಮೆ ಸತ್ತರೆ, ರೈತನಿಗೆ ಗಾಯವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸೇತುವೆ ಇಲ್ಲದ ಕಾರಣ ಪ್ರತಿನಿತ್ಯ ಚಪ್ಪಲಿ ಕೈಯಲ್ಲಿ ಹಿಡಿದು ಹಳ್ಳ ದಾಟಬೇಕಾದ ದುಸ್ಥಿತಿ ಜಿಲ್ಲೆಯ ಯಡ್ರಾಮಿ ತಾಲೂಕಿನ ತೆಲಗಬಾಳ ಗ್ರಾಮಸ್ಥರದ್ದಾಗಿದೆ.
ಹಲವು ಜಿಲ್ಲೆಗಳಲ್ಲಿ ಸತತ ಮಳೆ:
ಮೈಸೂರು, ಚಾಮರಾಜನಗರ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ರಾಯಚೂರು, ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸತತ ಮಳೆಯಾಗುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :