ಮುಖ್ಯ ಪುಟ > ವಿವಿಧ > ಸಾಹಿತ್ಯ > ಲೇಖನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನಲ್ಲಿ ಕನ್ನಡ ಬ್ಲಾಗರ್‌ಗಳ ಕಲರವ
ಬ್ಲಾಗುಗಳಲ್ಲಿ ಮಾಹಿತಿಪೂರ್ಣ ವಿಷಯ ವೈವಿಧ್ಯವಿರಲಿ: ಒಕ್ಕೊರಲ ಅಭಿಪ್ರಾಯ
'ಬ್ಲಾಗುಗಳು ಕೇವಲ ಭಾವನಾ ಲಹರಿಯಲ್ಲಿ ವಿಹರಿಸುವ ತಾಣಗಳಾಗದೆ, ಮಾಹಿತಿಪೂರ್ಣ ಲೇಖನಗಳನ್ನು ಹೊಮ್ಮಿಸಲಿ, ವಿಜ್ಞಾನ ತಂತ್ರಜ್ಞಾನದಲ್ಲಿ ಕನ್ನಡವನ್ನು ಉತ್ತುಂಗಕ್ಕೇರಿಸುವಲ್ಲಿ ಪೂರಕವಾಗಿರಲಿ. ಕನ್ನಡ ಎಂಬುದು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಲ್ಲ, ಅದೊಂದು ಜೀವನವಿಧಾನವೂ ಹೌದು ಎಂಬುದನ್ನು ತೋರಿಸಿಕೊಡಬೇಕು'...

WD
ಈ ರೀತಿಯಾಗಿ, ಜಿನುಗುತ್ತಿರುವ ಮಳೆಯ ನಡುವೆ ಅಂತರ್ಜಾಲ ಕನ್ನಡಿಗರ ಅಭಿಪ್ರಾಯದ ಮಳೆ ಸುರಿದದ್ದು ಬೆಂಗಳೂರಿನಲ್ಲಿ ಭಾನುವಾರ ಸಂಜೆ ನಡೆದ 'ಅಂತರ್ಜಾಲ ಕನ್ನಡಿಗರ ಸಮಾವೇಶ' ಸರಣಿಗೆ ನಾಂದಿ ಹಾಡಿದ ಮೊದಲ ಸಮಾವೇಶದಲ್ಲಿ.

ಇಂಟರ್ನೆಟ್‌ನಲ್ಲಿ ಪರಸ್ಪರ ಕಾಮೆಂಟ್ ಹಾಕುತ್ತಾ, ತೋಚಿದ್ದನ್ನು ಬರೆಯುತ್ತಾ, ಅವರ್ಯಾರು, ಇವರ್ಯಾರು ಅಂತ ತಲೆಕೆಡಿಸಿಕೊಂಡು, ಕೊನೆಗೂ ಪರಸ್ಪರ ಮಾತುಕತೆ ಮಾಡಿ ಪರಿಚಯ ಮಾಡಿಸಿಕೊಳ್ಳುವ ಉದ್ದೇಶದಿಂದ ಪ್ರಣತಿ ಪ್ರಕಾಶನ ಸಂಸ್ಥೆ ಏರ್ಪಡಿಸಿದ್ದ ಈ ಸಮಾವೇಶಕ್ಕೆ ಬಸವನಗುಡಿಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಮೊದಲ ಅಂತಸ್ತಿನಲ್ಲಿರುವ ಮನೋರಮಾ ಸಭಾಂಗಣದ ಪುಟ್ಟ ಹಾಲ್ ಹೌಸ್ ಫುಲ್ ಆಗಿಯೇ ಸಾಕ್ಷಿಯಾಯಿತು.

ಬ್ಲಾಗಿನಲ್ಲಿ ಏನು ಬರೀಬೇಕು, ಏನು ಬರೀಬಾರ್ದು ಎಂಬ ನಿತ್ಯನಿರಂತರ ಚರ್ಚೆಗೆ ಇಲ್ಲಿ ಮುನ್ನುಡಿ ಹಾಡಲಾಯಿತಷ್ಟೇ. ಅದಕ್ಕಿಂತ ಹೆಚ್ಚಾಗಿ ಅಂತರ್ಜಾಲ ಕ್ಷೇತ್ರದಲ್ಲಿ ಕನ್ನಡಕ್ಕೆ ಸಂಬಂಧಿಸಿದ ತಂತ್ರಾಂಶ ಸಮಸ್ಯೆಗಳ ಕುರಿತು ಮಾತುಕತೆ ನಡೆಯಿತು.

WD
ಸಂವಾದವೂ ನಡೆಯಿತು... ಚರ್ಚೆಯೂ ಆಯಿತು. ಆಗಮಿಸಿದ ಕನ್ನಡ ಬ್ಲಾಗರ್‌ಗಳು ತಮ್ಮ ತಮ್ಮೊಳಗೆ ಪರಿಚಯ ಮಾಡಿಕೊಳ್ಳುತ್ತಾ, ತಾವು ಯಾರ ಫ್ರೆಂಡ್ ಆಗಿದ್ದೇವೆ ಎಂಬುದನ್ನು ಕಣ್ಣಾರೆ ಕಂಡು ಧನ್ಯರಾಗುತ್ತಿದ್ದರೆ, ಮತ್ತೆ ಕೆಲವರು ಅಲ್ಲಿ ನೆರೆದ ಹಿರಿಯರೊಂದಿಗೆ ವಿಚಾರ ವಿನಿಮಯದಲ್ಲಿ ತೊಡಗಿದ್ದರು. ಹೆಸರು ಹೇಳಿದರೆ ಒಬ್ಬರಿಗೊಬ್ಬರು ಪರಿಚಯವಾಗುತ್ತಿರಲಿಲ್ಲ. ಬದಲಾಗಿ ಯುಆರ್ಎಲ್ ಹೇಳಿದ ತಕ್ಷಣ ಓಹ್... ನೀವಾ ಅಂತ ಕೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜ್ಞಾನ ಲೇಖಕನೂ ಸಾಹಿತಿಯೇ: ಸಮಾರಂಭದಲ್ಲಿ 'ವಿಶ್ವಕನ್ನಡ'ದ ಡಾ.ಯು.ಬಿ.ಪವನಜ ಅವರು ಕನ್ನಡ ಅಂತರ್ಜಾಲ ಲೋಕದ 'ಆ ದಿನಗಳ'ನ್ನು ಸ್ಮರಿಸಿಕೊಂಡರು. ತುಳು, ಕೊಂಕಣಿ ಮತ್ತು ಕೊಡವ ಭಾಷೆಗಳಿಗೂ ಯುನಿಕೋಡ್ ಸೌಲಭ್ಯ ದೊರೆಯುವಂತಾಗಬೇಕು, ಅಂತರ್ಜಾಲದಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಕುರಿತು ಸಲಹಾ ಸಮಿತಿ ರಚಿಸಬೇಕು, ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನುವಾದಕ್ಕಾಗಿ ಅಧಿಕೃತವಾದ ಪಾರಿಭಾಷಿಕ ಪದಕೋಶವೊಂದು ಆಗಬೇಕು, ಕ್ವಾರ್ಕ್ ಎಕ್ಸ್‌ಪ್ರೆಸ್ ಮತ್ತು ಅಡೋಬ್ ಅಪ್ಲಿಕೇಶನ್‌ಗಳಾದ ಇನ್‌ಡಿಸೈನ್, ಫೋಟೋಶಾಪ್, ಪಿಡಿಎಫ್, ಪೇಜ್‌ಮೇಕರ್ ಮುಂತಾದವುಗಳಲ್ಲೂ ಯುನಿಕೋಡ್ ಬೆಂಬಲ ಲಭ್ಯವಾಗುವಂತೆ ಒತ್ತಡ ತರಬೇಕು ಎಂದು ಆಗ್ರಹಿಸಿದ ಅವರು, ನಾವು ತಂತ್ರಾಂಶ ತಯಾರಿಸಿ ವಿದೇಶಕ್ಕೆ ರಫ್ತು ಮಾಡಿದ್ರೆ ಅದಕ್ಕೆ ತೆರಿಗೆಮುಕ್ತತೆಯ ಕೊಡುಗೆ, ಆದರೆ ಇಲ್ಲೇ ತಯಾರಿಸಿದ್ದನ್ನು ನಾವು ಖರೀದಿಸಿದರೆ ಹನ್ನೆರಡೂವರೆ ಶೇಕಡಾ ವ್ಯಾಟ್ ವಿಧಿಸುತ್ತಾರೆ, ಇದಾವ ನ್ಯಾಯ ಎಂದು ಪ್ರಶ್ನಿಸಿದರು.

WD
ಕನ್ನಡಕ್ಕೆ ಅತ್ಯಂತ ಉತ್ತಮವಾದದ್ದೊಂದು ಓಪನ್‌ಟೈಪ್ ಫಾಂಟ್ ಅಗತ್ಯವಿದೆ ಎಂದ ಅವರು, ಸಂಶೋಧಕರು ಭಾಷಾ ಸಂಸ್ಕರಣೆಗಾಗಿ (ಪದವೊಂದನ್ನು ನಾಮಪದ/ಕ್ರಿಯಾಪದ ಎಂಬಂತೆ ವಿಂಗಡಿಸುವ) ಟ್ಯಾಗ್ಡ್ ಕಾರ್ಪಸ್ ರಚನೆಯತ್ತ ಗಮನ ಹರಿಸಬೇಕು ಎಂದೂ ಸಲಹೆ ನೀಡಿದರಲ್ಲದೆ, ಸಾಹಿತಿಗಳು ಕೂಡ ಮಾಹಿತಿ ಹಂಚುವ ಕೆಲಸ ಮಾಡ್ಬೇಕು. ಮಾಹಿತಿ ತಂತ್ರಜ್ಞಾನದ ಬಗ್ಗೆ ಲೇಖನ ಬರೀಬೇಕು. ವಿಜ್ಞಾನ ಲೇಖಕ ಸಾಹಿತಿ ಅಲ್ಲ ಅನ್ನೋ ಮನೋಭಾವ ಬಿಡಬೇಕು ಎಂದರು.

ಕನ್ನಡ ತಂತ್ರಜ್ಞಾನ ಬೆಳವಣಿಗೆ ಅಗತ್ಯ: 'ಸಂಪದ'ದ ರೂವಾರಿ ಹರಿಪ್ರಸಾದ್ ನಾಡಿಗ್ ಅವರು, ತಂತ್ರಜ್ಞಾನಕ್ಕೆ ಸಂಬಂಧಿಸಿ ಆಗಬಹುದಾದ ಬೆಳವಣಿಗೆಗಳ ಬಗ್ಗೆ ಹೇಳುತ್ತಾ, ಕನ್ನಡಕ್ಕೆ ಕಾಗುಣಿತ ಪರೀಕ್ಷಕ, ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಪುಸ್ತಕ ಸ್ಕ್ಯಾನ್ ಮಾಡಿದರೆ ಅಕ್ಷರ ಗುರುತಿಸಬಲ್ಲ) ವ್ಯವಸ್ಥೆ, ಮಾತಿನಿಂದ ಪಠ್ಯ (ಸ್ಪೀಚ್ ಟು ಟೆಕ್ಸ್ಟ್) ಪರಿವರ್ತನೆ ವ್ಯವಸ್ಥೆಗಳಾಗಬೇಕು ಎಂದರು.

ಬ್ಲಾಗರ್‌ಗಳು ಸಾಮೂಹಿಕ ಭಾಗವಹಿಸುವಿಕೆ ವಿಶೇಷ ಒತ್ತು ನೀಡಬೇಕು ಅಂತ ಆಶಿಸಿದರು. ಬ್ಲಾಗ್ ಎಂಬುದು ಕಥೆ, ಕವನಕ್ಕೆ ಸೀಮಿತವಾಗೋದು ಬೇಡ, ಭಾವನಾ ಲೋಕದಲ್ಲೇ ವಿಹರಿಸುವ ಬದಲು, ಅಲ್ಲಿಂದಾಚೆಗೆ ಬಂದು ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಯ ಮಾಹಿತಿ ನೀಡುವ ಕೆಲಸ ಆಗಬೇಕು ಅಂತನೂ ಹೇಳಿದರಲ್ಲದೆ, ಆರ್ಕುಟ್‌ನಂತೆ ಕನ್ನಡದಲ್ಲೂ ಸಮುದಾಯ ತಾಣವೊಂದರ ಮಾಡುವ ಮುನ್ನ, ಯೋಚಿಸಿ ಹೆಜ್ಜೆ ಮುಂದಿಡಬೇಕಾದ ಅಗತ್ಯವಿದೆ ಎಂದು ನುಡಿದರು.

ಪ್ರಜ್ಞಾವಂತ ಓದುಗರು; 'ಕೆಂಡ ಸಂಪಿಗೆ' ತಾಣದ ಅಬ್ದುಲ್ ರಶೀದ್ ಮಾತನಾಡುತ್ತಾ, ಕನ್ನಡದಲ್ಲಿ ತಂತ್ರಜ್ಞಾನ ಅದ್ಭುತ ಬೆಳವಣಿಗೆ ಆಗಿದೆ. ಒಳ್ಳೆಯ ಲೇಖನಕ್ಕೆ ಹತ್ತಾರು ಥರ
WD
ಪ್ರತಿಕ್ರಿಯೆ ಮಾಡೋರಿರ್ತಾರೆ. ನಾವು ಬರೆದಿದ್ದಕ್ಕೆ ಈ ರೀತಿ ಕಾಮೆಂಟ್ ಮಾಡುವ ಮೂಲಕ, ನಮಗಿಂತ ಬುದ್ಧಿವಂತರಾಗಿರೋ ಓದುಗವಲಯವಿದೆ ಅನ್ನೋ ಭಾವನೆ ಮೂಡಿಸುತ್ತಿದ್ದು, ಇಂಥದ್ದೊಂದು ಪ್ರಜ್ಞಾವಂತ ಓದುಗ ವಲಯ ಸೃಷ್ಟಿಯಾಗಿದೆ. ಇದು ನಮಗೆ ಹೆಮ್ಮೆ ಎಂದರು.


ಬ್ಲಾಗುಗಳು ಭಾವ ಲಹರಿಯ ತಾಣಗಳಾಗುತ್ತಿವೆ. ಇದರ ಬದಲು ವಿಷಯವೈವಿಧ್ಯಕ್ಕೆ ಗಮನ ಹರಿಸೋಣ ಎಂದರವರು.

ಕಥೆ, ಕವನ ಬದಲು ಮಾಹಿತಿ ಇರಲಿ: ಕನ್ನಡ ಎಂಬುದು ಸಾಹಿತ್ಯಕ್ಕೆ ಸೀಮಿತವಾಗೋದು ಬೇಡ.. ಅದು ಜೀವನ ವಿಧಾನವಾಗಿರಲಿ ಎಂದು ನುಡಿದವರು 'ದಟ್ಸ್ ಕನ್ನಡ' ಸಂಪಾದಕ ಶ್ಯಾಮ್ ಸುಂದರ್. ಎಂದಿನಂತೆ ಲಘು ದಾಟಿಯಲ್ಲೇ ವಾಸ್ತವ ಚಿತ್ರಣವನ್ನು ತೆರೆದಿಡುತ್ತಾ ಹೋದರವರು.

ಅರೆನಗ್ನ ಹುಡುಗಿಯರ ಚಿತ್ರ ಹಾಕಿದ್ರೆ ಆಬ್ಜೆಕ್ಷನ್ ಬರುತ್ತೆ... ಆದ್ರೆ ಈ ರೀತಿಯ ಚಿತ್ರಗಳಿಗೇ ರಾತ್ರಿಯಾದ್ಮೇಲೆ 30-40 ಸಾವಿರ ಹಿಟ್ಸ್ ಬಂದಿರುತ್ತದೆ ಎನ್ನುತ್ತಾ, ಗ್ಯಾಲರಿಯಿಂದ ಸರ್ಚ್ ಇಂಜಿನ್ ಮುಖಾಂತರ ಬಂದೋರು ಮುಖಪುಟಕ್ಕೂ ಬರ್ತಾರೆ. ಈ ಮೂಲಕ ಓದುಗ ವರ್ಗ ಬೆಳೆಯುತ್ತದೆ ಎಂದರು.

WD
ಬ್ಲಾಗುಗಳಲ್ಲಿನ ವಸ್ತುವಿಷಯದ ಬಗ್ಗೆ ಮಾತನಾಡುತ್ತಾ, ಇಲ್ಲಿ 'ನಾವು ನಮ್ಮಿಷ್ಟ' ಎನ್ನುತ್ತಾ ಯಾವುದೇ ಗಂಭೀರತೆ ಇಲ್ಲದೆ ಬರೆಯುವುದು ಸಮಂಜಸವಲ್ಲ, ನಾನೊಬ್ಬ ಕಥೆಗಾರ, ಕವಿ ಆಗಬೇಕು ಎಂಬ ಉದ್ದೇಶದಿಂದಲೇ ಬರೆಯುವವರಿದ್ದಾರೆ. ಈ ಮನೋಭಾವ ಬದಲಾಗಿ ವಿಷಯದ ಆಯ್ಕೆಯಲ್ಲಿ ವೈವಿಧ್ಯತೆ ಇರಬೇಕು. ಜನರಿಗೆ ಬೇಕಾದ ಮಾಹಿತಿ ಒದಗಿಸುವ ಬ್ಲಾಗ್‌ಗಳು ಬೇಕು. ಜೀವನದ ಗುಣಮಟ್ಟ ಸುಧಾರಿಸಬಲ್ಲ ಬ್ಲಾಗ್‌ಗಳು ಬೇಕು ಎನ್ನುತ್ತಾ, ಹಿರಿಯ ನಾಗರಿಕರಿಗಾಗಿ ಸಮಗ್ರ ಮಾಹಿತಿ ನೀಡಬಲ್ಲ ತಾಣವೊಂದರ ಅಗತ್ಯವನ್ನು ಉದಾಹರಣೆಯಾಗಿ ನೀಡಿದರು.

ಆಯ್ದ ಬ್ಲಾಗರ್‌ಗಳು ತಮ್ಮ ಅಭಿಪ್ರಾಯ ಮಂಡಿಸಿದರು. ಬ್ಲಾಗರ್‌ಗಳು ವೆಬ್‌ಸೈಟ್ ಮಾಡಿಕೊಳ್ಳುವಂತೆ ಬೇಳೂರು ಸುದರ್ಶನ್ ಪ್ರೋತ್ಸಾಹದ ಮಾತನ್ನಾಡಿದರು. ಸುಮಾರು 350ರಷ್ಟು ಕನ್ನಡ ಬ್ಲಾಗುಗಳಿವೆ ಎಂಬ ಮಾಹಿತಿಯೂ ದೊರೆಯಿತು. ಸಭೆಯಲ್ಲಿ ನೆರೆದಿದ್ದವರ ಸಂಖ್ಯೆ ಶತಕ ದಾಟಿತ್ತು.

ಅರುಣ್ ಮತ್ತು ಶ್ರೀನಿವಾಸ್ ಪ್ರಾರ್ಥನೆ ಹಾಡಿದರು. ಶ್ರೀನಿಧಿ ಡಿ.ಎಸ್. ಸ್ವಾಗತಿಸಿದರು. ನೋಡ್ಬೇಕು, ಪರಿಚಯ ಮಾಡ್ಕೊಳ್ಬೇಕು ಎನ್ನೋ ಉದ್ದೇಶದಿಂದ ಈ ಅಂತರ್ಜಾಲ ಕನ್ನಡಿಗರ ಸಭೆ ಕರೆಯಲಾಗಿದೆ ಎಂದು ಸುಶ್ರುತ ದೊಡ್ಡೇರಿ ಆಶಯ ವಿವರಿಸಿದರು. ವಿಜಯಾ ಪ್ರಸನ್ನ ವಂದಿಸಿದರು. ಅಮರ್ ಕಾರ್ಯಕ್ರಮ ನಿರೂಪಿಸಿದರು.
ಮತ್ತಷ್ಟು
ಮಾ.16: ಕನ್ನಡ ಬ್ಲಾಗಿಗರು ಸಮಾವೇಶಗೊಳ್ಳುತ್ತಿದ್ದಾರೆ...
ವೆಬ್‌ದುನಿಯಾ ವಾರದ ಬ್ಲಾಗ್: ಓ ನನ್ನ ಚೇತನಾ
ವೆಬ್‌ದುನಿಯಾ ವಾರದ ಬ್ಲಾಗ್: ಮೌನಗಾಳ
ವೆಬ್‌ದುನಿಯಾ ವಾರದ ಬ್ಲಾಗ್: ಹರಿವ ಲಹರಿ
ವೆಬ್‌ದುನಿಯಾ ವಾರದ ಬ್ಲಾಗ್: ಅಲೆಮಾರಿಯ ಅನುಭವ
ವೆಬ್‌ದುನಿಯಾ ವಾರದ ಬ್ಲಾಗ್: ಇಸ್ಮಾಯಿಲ್