1942ನೆಯ ಇಸವಿ. ಪಾಕಿಸ್ತಾನದ ಮಿಯಾನ್‌ವಲಿ ಸೆರೆಮನೆಯಲ್ಲಿ ಸೆರೆಮನೆಯ ಮೇಲಧಿಕಾರಿ ರಾತ್ರಿ ಸಮಯದಲ್ಲಿ ಕಾವಲುಗಾರರಿಗೆ ಮೊದಲೇ ತೀರ್ಮಾನಿದಲಾಗಿದ್ದ ರಹಸ್ಯ ಸಂಕೇತ ಪದವನ್ನು ಹೇಳುತ್ತಾ ಹೋಗುತ್ತಿದ್ದರು. ಒಬ್ಬ ಸಿಪಾಯಿಯ ಬಳಿಗೆ ಬಂದು ತಪ್ಪಾದ ಸಂಕೇತವನ್ನು ಹೇಳಿದರು.
ಕೂಡಲೇ ಆ ಕಾವಲು ಸಿಪಾಯಿ ಮೇಲಧಿಕಾರಿಯನ್ನು ಅಲ್ಲಿಯೇ ತಡೆದು ನಿಲ್ಲಿಸಿ, ಹುಷಾರ್, ಮುಂದಕ್ಕೆ ಒಂದು ಹೆಜ್ಜೆ ಇಟ್ಟರೆ ಸುಟ್ಟು ಬಿಡುತ್ತೇನೆ ಎಂದು ಗುಡುಗಾಡಿದ. ಆಗ ಮೇಲಧಿಕಾರಿ, ಅರೆ, ಒಂದು ಸೊಂಡೆಕಾಯಿ ಪ್ರಮಾಣದಷ್ಟು ಸಣ್ಣ ಕಾವಲುಗಾರನಿಗೆ ಇಷ್ಟು ಗರ್ವವೆ. ನಿನ್ನನ್ನು ಕಂಬಿ ಎಣಿಸುವಂತೆ ಮಾಡುತ್ತೇನೆ. ಕೋರ್ಟಿಗೆ ಅಲೆಯುವಂತೆ ಮಾಡುತ್ತೇನೆ ಎಂದು ರೇಗಾಡಿದರು.
ಸ್ವಾಮಿ, ನಾನು ಯಾವ ತಪ್ಪನ್ನೂ ಮಾಡಿಲ್ಲ. ಆದ್ದರಿಂದ ಕ್ಷಮೆ ಕೇಳುವುದಿಲ್ಲ ಎಂದು ಸಾವಧಾನವಾಗಿಯೇ ಆ ಕಾವಲು ಸಿಪಾಯಿ ಉತ್ತರಿಸಿದ. ಕ್ಷಮೆ ಕೇಳದಿದ್ದರೆ ಆರು ತಿಂಗಳು ಸೆರೆವಾಸಿದ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಮೇಲಧಿಕಾರಿ. ಅದಾದ ನಂತರ ಆ ಸಿಪಾಯಿಯನ್ನು ಸೆರೆಮನೆಯ ಉನ್ನತಾಧಿಕಾರಿಯ ಮುಂದೆ ನಿಲ್ಲಿಸಲಾಯಿತು. ನಿನ್ನ ಮೇಲಧಿಕಾರಿಯನ್ನೇ ಸುಟ್ಟುಕೊಂದು ಹಾಕಲು ನೀನು ಸಿದ್ದವಾಗಿದ್ದೀಯೆ. ಅದು ತಪ್ಪಲ್ಲ ಎಂದು ಈಗ ಹೇಳುತ್ತಿದ್ದೀಯಾ ಎಂದು ಉನ್ನತಾಧಿಕಾರಿ ಕೇಳಿದಾಗ, ನನ್ನ ಮೇಲಧಿಕಾರಿಯ ವಿರುದ್ಧ ತಿರುಗಿ ಬೀಳಲು ನನಗೇನು ಆಗತ್ಯ. ಕರ್ತವ್ಯದಲ್ಲಿ ಕಟ್ಟೆಚ್ಚರವಿರುವಂತೆ ಅವರೇ ನನಗೆ ಹೇಳಿದ್ದಾರೆ ಎಂದು ಧೈರ್ಯವಾಗಿಯೇ ಉತ್ತರಿಸಿದ ಆ ಕಾವಲು ಸಿಪಾಯಿ. ಏನೇ ಹೇಳಿದರೂ ತನ್ನ ತಪ್ಪನ್ನು ಕ್ಷಮಿಸುವಂತೆ ಕೇಳಿಕೊಳ್ಳಲು ಆ ಕಾವಲುಗಾರ ಸಿದ್ಧನಾಗಲಿಲ್ಲ.
ಈ ಮಧ್ಯೆ ಸೆರೆಮನೆಯ ನ್ಯಾಯಾಲಯ ಅವನಿಗೆ ಆರು ತಿಂಗಳು ಸೆರೆವಾಸದ ಶಿಕ್ಷಯನ್ನು ವಿಧಿಸಿ ತೀರ್ಪು ನೀಡಿತು. ಇಳಿವಯಸ್ಸಿನ ತಾಯಿ, ರೋಗಿಯಾಗಿದ್ದ ಹೆಂಡತಿ, ಚಿಕ್ಕ ವಯಸ್ಸಿನ ಮಕ್ಕಳು ಎಲ್ಲರೂ ಕಂಗಾಲಾಗಿ ಅಳಲು ಮೊದಲು ಮಾಡಿದರು. ಆದರೆ ಇದರಿಂದ ಮನಸ್ಸನ್ನು ಎಳ್ಳಷ್ಟೂ ಬದಲಾಯಿಸಲು ಇಷ್ಟಪಡದ, ಕರ್ತವ್ಯನಿರತನಾದ ಆ ಕಾವಲುಗಾರ ಶಿಕ್ಷೆಯನ್ನು ಅನುಭವಿಸಲು ಸಿಧ್ಧನಾಗಿ ಹೊರಟ.
ಸ್ವಲ್ಪ ಸಮಯದ ನಂತರ ಆ ಕಾವಲು ಸಿಪಾಯಿಯಿದ್ದ ಸೆರೆಮನೆಗೆ ಸೆರೆಮನೆಯ ಉನ್ನತ ಅಧಿಕಾರಿಯೂ, ಮೇಲಧಿಕಾರಿಯೂ ಬಂದರು. ಮುಖ್ಯ ಕಾವಲಧಿಕಾರಿ ಎಂಬ ಪದವಿಗೆ ಬಡ್ತಿಯನ್ನು ನೀಡಿರುವ ಆದೇಶಪತ್ರವನ್ನು ಅವರು ಆ ಕಾವಲು ಸಿಪಾಯಿಯ ಕೈಗೆ ಕೊಟ್ಟು ಇಷ್ಟು ಕಾಲ ನಡೆದದ್ದೆಲ್ಲವೂ ನಾಟಕ. ಶಿಸ್ತು ನಿಯಮವನ್ನು ಪರೀಕ್ಷಿಸಲು ಇದನ್ನು ನಡೆಸಿದವು. ಇದರಲ್ಲಿ ನೀನು ಮಾತ್ರ ಗೆದ್ದಿದ್ದೀಯೆ. ಆದ್ದರಿಂದ ನಿನಗೆ ಪದವಿಯಲ್ಲಿ ಬಡ್ತಿ ನೀಡಲಾಗಿದೆ ಎಂದು ಹೇಳಿ ಅವನನ್ನು ಕೊಂಡಾಡಿದರು. ಪುಟವಿಟ್ಟ ಚಿನ್ನದಂತೆ ಕಾವಲು ಸಿಪಾಯಿಯ ಮುಖ ಬೆಳಗಿತು.
- ಡಾ| ವಿ. ಗೋಪಾಲಕೃಷ್ಣ (ಲೇಖಕರ ಪರಿಚಯ - ಡಾ. ವಿ. ಗೋಪಾಲಕೃಷ್ಣ ಅವರು ನಿವೃತ್ತ ಕನ್ನಡ ಪ್ರಾಧ್ಯಾಪಕರು. ಬಹುಭಾಷಾ ವಿದ್ವಾಂಸರಾದ ಇವರು ಭಾಷಾ ಶಾಸ್ತ್ರ, ಸ್ಥಳನಾಮ ಶಾಸ್ತ್ರ, ನಿಘಂಟು ಹಾಗೂ ಸಂಪಾದಕರಾಗಿ, ಅನುವಾದಕರಾಗಿ ಬಹುಮುಖ ಸೇವೆ ಸಲ್ಲಿಸಿದ್ದಾರೆ. ಇವರ ಅನೇಕ ಸಂಶೋಧನಾತ್ಮಕ ಗ್ರಂಥಗಳು, ಲೋಖನಗಳು ಪ್ರಕಟವಾಗಿವೆ. ಪ್ರಸ್ತುತ ಚೆನ್ನೈ ನಗರದ ಅಡಯಾರಿನ ಒಂದು ಸಂಶೋಧನಾತ್ಮಕ ಸಂಸ್ಥೆಯ ನಿರ್ದೇಶಕರಾಗಿದ್ದು, ಸಂಶೋಧನೆಯಲ್ಲಿ ಮತ್ತು ಮಾರ್ಗದರ್ಶನ ನೀಡುವುದರಲ್ಲಿ ತೊಡಗಿದ್ದಾರೆ.)
|