ಮುಖ್ಯ ಪುಟ > ವಿವಿಧ > ರಾಜ್ಯೋತ್ಸವ > ಲೇಖನ > ಕನ್ನಡದ ಮಕ್ಕಳೆಲ್ಲ ಒಂದಾಗಿ ನಿಲ್ಲಿ..
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡದ ಮಕ್ಕಳೆಲ್ಲ ಒಂದಾಗಿ ನಿಲ್ಲಿ..
ನಾಗರಾಜ್ ಭೂತನಹೊಸೂರು
NRB
ಕನ್ನಡ ರಾಜ್ಯೋತ್ಸವ ದಿನ ಮತ್ತೆ ಬಂದಿದೆ. 'ನವೆಂಬರ್ ಕನ್ನಡಿಗರು' ಈಗಾಗಲೇ ಜಾಗೃತರಾಗಿದ್ದಾರೆ. ಮತ್ತೊಂದು ಕಡೆ ಕನ್ನಡದ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಮಂದಿ ಬೀದಿಬೀದಿಯಲ್ಲಿ ಕೆಂಪು-ಹಳದಿ ಬಣ್ಣದ ಬಾವುಟ-ಬಂಟಿಂಗ್ಸ್‌ಗಳನ್ನು ಕಟ್ಟಿ ಕನ್ನಡಕ್ಕೆ ಜೈ, ಕನ್ನಡಕ್ಕೆ 'ಕೈ ಎತ್ತು' ಇತ್ಯಾದಿ ಘೋಷಣೆಗಳನ್ನು ಕೂಗಿ ಮೋಟರ್ ಬೈಕಿನ ಮೇಲೆ ದೊಡ್ಡ ಬಾವುಟಗಳನ್ನು ಹಿಡಿದು ಅತೀವ ಕನ್ನಡ ಪ್ರೇಮವನ್ನು ಸಾರಲು ಸಜ್ಜಾಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಕನ್ನಡಿಗರು ತಮ್ಮನ್ನು ತಾವು ಕನ್ನಡಿಗ/ಕನ್ನಡತಿ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ಕನ್ನಡದೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವುದು ತಮ್ಮ ಸ್ಥಾನಮಾನಕ್ಕೆ ಕುಂದುಂಟಾಗುತ್ತದೆ ಎಂಬ ಕೀಳರಿಮೆಯನ್ನು ವಿದ್ಯಾವಂತ ಕನ್ನಡಿಗರಲ್ಲೂ ನಾವು ನೋಡಬಹುದಾಗಿತ್ತು. ಈ ಬೆಳವಣಿಗೆಗಳಿಗೆ ನಾವು ಜವಾಬ್ದಾರರಲ್ಲ ಬದಲಾಗಿ ಇದೆಲ್ಲ ಜಾಗತೀಕರಣದ ಫಲವೆಂದು ಬಹುರಾಷ್ಟ್ರೀಯ ಕಂಪನಿಗಳ ಕಡೆ ಬೆರಳು ತೋರುವುದು ರೂಢಿಯಾಗಿಟ್ಟಿತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಆಶಾದಾಯಕ ಬೆಳವಣಿಗೆಗಳು ಘಟಿಸುತ್ತಿವೆ. ಸಾಹಿತ್ಯ ಮತ್ತು ವಿದ್ಯುನ್ಮಾನ ಕ್ಷೇತ್ರದ ಹಲವು ಕನ್ನಡ ಮಕ್ಕಳು ಕಲೆತು ಕನ್ನಡ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಕನ್ನಡವು ಒಂದು ಸಮರ್ಥ ಆಡಳಿತ ಭಾಷೆಯಾಗಿ ಹೊರಹೊಮ್ಮಬೇಕಾಗಿರುವುದು ಇಂದಿನ ತುರ್ತು ಅಗತ್ಯ ಎಂದು ಇವರಿಗೆಲ್ಲ ಮನವರಿಕೆಯಾಗಿದೆ. ಸಮರ್ಥ ಆಡಳಿತ ಭಾಷೆಯೆಂದರೆ ಕರ್ನಾಟಕ ಸರ್ಕಾರದ ವ್ಯವಹಾರದ ಎಲ್ಲ ಸ್ತರಗಳಲ್ಲೂ ಕನ್ನಡ ಪ್ರವಹಿಸಬೇಕು ಎಂಬುದು. ಆದರೆ, ಈ ಆಶಯ ಅನುಷ್ಠಾನವಾಗಬೇಕಾದರೆ ಕನ್ನಡ ನುಡಿ ಏರುದಾರಿಯಲ್ಲಿ ಬಹುದೂರ ಸಾಗಬೇಕಾಗಿದೆ. ಈ ದಾರಿಯಲ್ಲಿ ಹಲವು ತೊಡಕುಗಳು ಅಡ್ಡ ಕುಳಿತಿರುವುದು ಕಣ್ಣಿಗೆ ರಾಚುತ್ತಿದೆ. ಅವುಗಳಲ್ಲಿ ಅತಿ ಪ್ರಮುಖವಾದುದು ರಾಜಕೀಯ ಒಮ್ಮತ.

ಮೂಲ ಕನ್ನಡ ನಾಡು ಅನೇಕ ಪ್ರಾಂತ್ಯಗಳ ಆಡಳಿತಕ್ಕೊಳಪಟ್ಟು ನಂತರ ಒಂದುಗೂಡಿದ್ದರೂ ರಾಜಕೀಯವಾಗಿ ಒಮ್ಮತ ಮೂಡುವುದು ಸಾಧ್ಯವಾಗಿಲ್ಲ. ಭಾರತ ಸ್ವಾತಂತ್ರ್ಯ ಪಡೆದ ಮೇಲೆ 'ಕನ್ನಡ ನುಡಿ'ಯನ್ನಾಡುವ ಜನರು ನೆಲೆಸಿರುವ ಪ್ರದೇಶಗಳ ಆಧಾರದ ಮೇಲೆ ಕರ್ನಾಟಕ ಏಕೀಕರಣಗೊಂಡಿತು. ಆದರೆ ಕನ್ನಡ ಕರ್ನಾಟಕದ ರಾಜಭಾಷೆಯಾಗಿ ಅಧಿಕೃತ ಸ್ಥಾನಮಾನ ಪಡೆಯಲು ಹೋರಾಡಬೇಕಾಯಿತು ಎಂದರೆ, ಕನ್ನಡ ನಾಡಿನಲ್ಲಿ ಕನ್ನಡ ಜನರನ್ನಾಳುವವರಿಗೆ ಇದ್ದ ಅಭಿಮಾನ ಎಂಥದ್ದು ಎಂದು ತಿಳಿಯಬಹುದು. ಕರ್ನಾಟಕ ಸರ್ಕಾರದ ವ್ಯವಹಾರಗಳಲ್ಲಿ ಇಂದಿಗೂ ಸಹ ಕನ್ನಡ ಅನುಷ್ಠಾನವಾಗಿಲ್ಲ. ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲ ಕನ್ನಡ ಕಹಳೆ ಮೊಳಗಿಸತೊಡಗಿವೆ. ಜೊತೆಜೊತೆಗೆ ಈ ಕಹಳೆಗೆ ರಾಜಕೀಯ ಉಸಿರು ತುಂಬಿ ಅದನ್ನು ಕರ್ಕಶವಾಗಿಸಿವೆ.
1 | 2  >>  
ಮತ್ತಷ್ಟು
ಶಿಕ್ಷಣದ ವ್ಯಾಪಾರೀಕರಣ ತಾಳಿಕೊಂಡೀತೇ ಕನ್ನಡ?
ಕನ್ನಡದ ಬಗ್ಗೆ ತಾತ್ಸಾರ ಬೇಡ