ಮುಖ್ಯ ಪುಟ > ವಿವಿಧ > ರಾಜ್ಯೋತ್ಸವ > ಲೇಖನ > ಅನ್ಯ ಭಾಷಾಕ್ರಮಣದಿಂದ ಕುಗ್ಗುತ್ತಿದೆ ಕನ್ನಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅನ್ಯ ಭಾಷಾಕ್ರಮಣದಿಂದ ಕುಗ್ಗುತ್ತಿದೆ ಕನ್ನಡ
ಭುವನ್ ಪುದುವೆಟ್ಟು
ಜಗತ್ತಿನ ನಾಲ್ಕಾರು ಕೋಟಿ ಜನ ಮಾತನಾಡುವ ಭಾಷೆ ಕನ್ನಡ; ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆಗಳ ಸಾಲಿನಲ್ಲಿ 27ನೇ ಸ್ಥಾನದಲ್ಲಿದೆ ಕನ್ನಡ; ಪಂಚದ್ರಾವಿಡ ಭಾಷೆಗಳಲ್ಲೊಂದು ಕನ್ನಡ; ಭಾರತದ ಅಧಿಕೃತ 22 ಭಾಷೆಗಳಲ್ಲೊಂದು ಕನ್ನಡ; ಕರ್ನಾಟಕದ ಆಡಳಿತ ಭಾಷೆ ಕನ್ನಡ; ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತ್ಯ ಕನ್ನಡ; ತುಳು, ಕೊಂಕಣಿ ಮತ್ತು ಕೊಡವ ಭಾಷೆಗಳನ್ನು ಬರೆಯಲು ಉಪಯೋಗಿಸುವ ಲಿಪಿ ಕನ್ನಡ.

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇದನ್ನೆಲ್ಲ ಕನ್ನಡದಲ್ಲಿ ಕನ್ನಡದವರಿಗೆ ನೆನಪಿಸಲು ಸಕಾಲವೆನಿಸಿದ್ದರಿಂದ ಇಷ್ಟನ್ನೆಲ್ಲ ಪ್ರಸ್ತಾಪಿಸಬೇಕಾಯಿತು. ಇಷ್ಟೊಂದು ಹೆಗ್ಗಳಿಕೆ-ಬಳಕೆಯಿರುವ ಕನ್ನಡವೇಕೆ ಆಗಾಗ ಅವಮಾನಕ್ಕೊಳಗಾಗುತ್ತಿದೆ? ಗಡಿ ಜಗಳವೇಕೆ ವರ್ಷಕ್ಕೊಮ್ಮೆ ಮುಗಿಲು ಮುಟ್ಟುತ್ತದೆ? ಶಾಸ್ತ್ರೀಯ ಸ್ಥಾನ-ಮಾನಕ್ಕೇಕೆ ಇಷ್ಟು ವರ್ಷಗಳ ಕಾಲ ಕಾಯಬೇಕಾಯಿತು? ಆ ಬಗ್ಗೆ ಅಲ್ಪಸ್ವಲ್ಪ ವಿಚಾರಗಳನ್ನು ಬಿಂಬಿಸುವ ಯತ್ನ ಈ ಕೆಳಗೆ ಮಾಡಲಾಗಿದೆ.

1950ರಲ್ಲಿ ಒಕ್ಕೂಟ ರಾಜ್ಯಗಳ ವ್ಯವಸ್ಥೆ ಜಾರಿಯಾದ ನಂತರ 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಾಯಿತು. ಅದನ್ನೇ ನಾವಿಂದು ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಿರುವುದು. ಅಂದು ನಮ್ಮ ರಾಜ್ಯದ ಹೆಸರು ಮೈಸೂರು ಎಂದಾಗಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ 52 ವರ್ಷಗಳ ನಂತರ ನಮಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆಯಾದರೂ, ಕನ್ನಡಕ್ಕಾಗಿ ನೇಮಿಸಲ್ಪಟ್ಟ ಆಯೋಗಗಳ ವರದಿಗಳಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. 1956ರಲ್ಲಿ ಮಹಾಜನ್ ವರದಿಯನ್ನು ನೆಹರೂ ಸರಕಾರಕ್ಕೆ ಸಲ್ಲಿಸಿದ ಪ್ರಕಾರ ಕಾಸರಗೋಡು ಕರ್ನಾಟಕಕ್ಕೆ ಯಾವತ್ತೋ ಸೇರಬೇಕಿತ್ತು. ಬೆಳಗಾವಿ ಕರ್ನಾಟಕದ್ದೆಂಬುದು ನಿರ್ವಿವಾದವಾಗಬೇಕಿತ್ತು. ಹೊಗೇನಕಲ್‌ನಂತಹ ಸಮಸ್ಯೆ ಬರಬಾರದಿತ್ತು. ಆದರೆ ಇಂದು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಹಿಂದಿದ್ದ ಆಸಕ್ತಿ ಅವರಿಗಿಲ್ಲ, ಸೇರಿಸಬೇಕೆಂಬ ಆಶಯ ನಮ್ಮಲ್ಲೂ ಉಳಿದಿಲ್ಲ. ಅಂದು ಚಳುವಳಿಗಳು ಕಾವೇರುತ್ತಿದ್ದಂತೆ ಕೇರಳ ಸರಕಾರ ಕಾಸರಗೋಡಿಗೆ ಹೆಚ್ಚಿನ ಮಹತ್ವ ಕೊಟ್ಟು ಅಭಿವೃದ್ಧಿಯತ್ತ ಮುಖ ಮಾಡಿತು. ಇವತ್ತು ಕೂಡ ಕನ್ನಡವನ್ನು ನಿರ್ಲಕ್ಷಿಸದೆ, ಮಲಯಾಳವನ್ನು ಹೇರುವ ಕೆಲಸವನ್ನು ಕೇರಳ ಮಾಡುತ್ತಿಲ್ಲ. ಹಾಗಾಗಿ ಈಗ ಈ ಬಗೆಗಿನ ಒತ್ತಾಯ ಚಳುವಳಿಗಳು ಕ್ಷೀಣಿಸಿವೆ. ಆದರೂ ಕೈಯಾರ ಕಿಞಣ್ಣ ರೈಯಂತಹ ಹಿರಿಯರು ಇನ್ನೂ ಪ್ರಯತ್ನ ಬಿಟ್ಟಿಲ್ಲ.

ಇನ್ನು ಬೆಳಗಾವಿಯ ವಿವಾದ ಸುಪ್ರೀಂ ಕೋರ್ಟು ಮೆಟ್ಟಿಲೇರಿದೆ. ನಂತರದ ಸರೋಜಿನಿ ಮಹಿಷಿ ವರದಿಯ ಅನುಷ್ಠಾನವಾಗಿರುತ್ತಿದ್ದರೆ ಮತ್ತಷ್ಟು ಸಮಸ್ಯೆಗಳು ಪರಿಹಾರ ಕಾಣುತ್ತಿದ್ದುವೇನೋ. ಕನ್ನಡಿಗರಿಗೆ ಸರಕಾರಿ ಉದ್ಯೋಗದಲ್ಲಿ ಶೇಕಡಾ 86ರಷ್ಟು ಮೀಸಲಾತಿ ನೀಡಬೇಕೆಂದು ಆ ವರದಿ ಹೇಳಿತ್ತು. ಅದರ ಬಗ್ಗೆ ಯಾವ ಸರಕಾರವೂ ತಿರುಗಿ ನೋಡಿಲ್ಲ.

ನವೆಂಬರ್ 1, 1973ರಂದು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಲಾಯಿತು. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿದ್ದ ಹೈದರಾಬಾದ್ ಪ್ರಾಂತ್ಯ, ಮುಂಬೈ ಪ್ರಾಂತ್ಯ, ಮದರಾಸು ಪ್ರಾಂತ್ಯಗಳನ್ನು ಒಗ್ಗೂಡಿಸಲಾಗಿತ್ತು. ಮೈಸೂರು ರಾಜ್ಯವೆಂಬುದನ್ನು ಮರೆತು ಕರ್ನಾಟಕವೆಂದು ಹೇಳುತ್ತಿದ್ದರೂ, ಕರ್ನಾಟಕದ ಭಾಗಗಳನ್ನು ಗುರುತಿಸಲಾಗುತ್ತಿರುವುದು ಅದೇ ಬ್ರಿಟೀಷರ ಪ್ರಾಂತ್ಯಾವಾರು ಲೆಕ್ಕಚಾರದಲ್ಲಿ. ಇದರಲ್ಲಿ ದಾಸ್ಯದ ಸಂಕೇತವಿದ್ದು ಹೈದರಾಬಾದ್ ಪ್ರಾಂತ್ಯ, ಮುಂಬೈ ಪ್ರಾಂತ್ಯವೆಂಬುದನ್ನು ಉಪಯೋಗಿಸಬಾರದು ಎಂದು ದೊಡ್ಡದೊಂದು ಲೇಖನವನ್ನು ಸಾಹಿತಿ ಚಿದಾನಂದ ಮ‌ೂರ್ತಿಯವರು ಬರೆದಿದ್ದರು. ಬದಲಾದ ಸನ್ನಿವೇಶದಲ್ಲಿ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ (ಬಸವ ಕಲ್ಯಾಣ) ಮತ್ತು ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ (ಕಿತ್ತೂರು ಚೆನ್ನಮ್ಮ)ವೆಂದು ಕರೆಯಬೇಕಿತ್ತು. ಯಾರೇನೇ ಹೇಳಿದರೂ ನಮ್ಮ ರಾಜಕಾರಣಿಗಳದ್ದು ಆನೆ ನಡೆದದ್ದೇ ದಾರಿ ಎಂಬಂತಾಗಿದೆ. ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಇದಕ್ಕೆ ಹೊರತಾಗಿಲ್ಲವೆಂಬುದನ್ನು ಅವರ ಭಾಷಣಗಳಲ್ಲಿ ನೀವೀಗಾಗಲೇ ಗಮನಿಸಿರುತ್ತೀರಿ.

ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಾಸ್ತ್ರೀಯ ಸ್ಥಾನಮಾನ ಕೊಡಿ ಎಂದು ಸಾಕಷ್ಟು ಅವತಾರಗಳನ್ನು ಕರ್ನಾಟಕ ತೋರಿಸಿಯಾಗಿದೆ. ಶಾಸ್ತ್ರೀಯ ಸ್ಥಾನಮಾನ ಕೊಡಬೇಕೆಂದು ಒತ್ತಾಯಿಸಿ ಸಾಹಿತಿ ದೇಜಗೌ ಮ‌ೂರು ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದರು. ಶಾಸ್ತ್ರೀಯ ಸ್ಥಾನಮಾನ

ಕ್ಕಿರಬೇಕಾದ ಮಾನದಂಡ 1000 ವರ್ಷಗಳು ಎಂದಿದ್ದನ್ನು ತಮಿಳುನಾಡಿನ ಚಿತಾವಣೆಯಿಂದಾಗಿ ಕೇಂದ್ರದಲ್ಲಿ 1500 ವರ್ಷಗಳು ಎಂದು ತಿದ್ದುಪಡಿ ಮಾಡಲಾಯಿತು. ನಮ್ಮಲ್ಲಿ 1000 ವರ್ಷ ಹಳೆಯದಾದ ಹಲ್ಮಿಡಿ ಶಾಸನವಿದೆ. ಅದಕ್ಕೂ ಮೊದಲು ಕನ್ನಡ ಬಳಸಿದ ಬಗ್ಗೆ ಸಾಕಷ್ಟು ಕುರುಹುಗಳು ದೊರೆತಿವೆ. ಈ ಬಾರಿ ಶಾಸ್ತ್ರೀಯ ಸ್ಥಾನಮಾನ ಕೊಡಬಹುದು ಎಂಬ ಶಿಫಾರಸ್ಸು ಮಾಡಿದಾಗಲೂ ತಮಿಳುನಾಡಿನದ್ದು ಅಡ್ಡಗಾಲು. ಈ ಸಂಬಂಧ ನವೆಂಬರ್ 5ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ದಿಲ್ಲಿ ರಾಜ್‌ಘಾಟ್‌ನಲ್ಲಿ ಧರಣಿ ನಡೆಸಲು ನಿಯೋಗವೊಂದು ತೆರಳುವ ಉದ್ದೇಶವಿಟ್ಟುಕೊಂಡಿತ್ತು. ಅಷ್ಟರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಿಸಲಾಗಿದೆ. ಇಷ್ಟು ವರ್ಷಗಳ ಹೋರಾಟ ಕೊನೆಗೂ ಫಲ ಕೊಟ್ಟಿದೆ. ಆ ಮೂಲಕ ಕರ್ನಾಟಕ ರಾಜ್ಯೋತ್ಸವಕ್ಕೆ ಕೇಂದ್ರದಿಂದ ಬಲುದೊಡ್ಡ ಉಡುಗೊರೆ ಸಿಕ್ಕಂತಾಗಿದೆ.

ಇನ್ನು ಆಡಳಿತ ಭಾಷೆಯಾಗಿ ಕನ್ನಡ ಕರ್ನಾಟಕದಲ್ಲಿ ಯಶಸ್ವಿಯಾಗಿದೆಯೇ? ಇಲ್ಲ ಎಂಬ ಉತ್ತರವನ್ನು ಸ್ಪಷ್ಟವಾಗಿ ನೀಡಬಹುದುದು. ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇತ್ತೀಚೆಗೆ ಕನ್ನಡದಲ್ಲಿ ತೀರ್ಪು ಕೊಡುವ ನ್ಯಾಯಾಧೀಶರಿಗೆ ಸನ್ಮಾನ ಮಾಡುವ ಬಗ್ಗೆ ಕೂಡ ಮಾತನಾಡಿದ್ದರು. ಅಂದರೆ ಊಹಿಸಿಕೊಳ್ಳಿ- ಕನ್ನಡದ ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆಯೆಂದು? ಅಂಗಡಿ-ಮುಂಗಟ್ಟುಗಳು, ಕಚೇರಿಗಳು ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಬಳಸಬೇಕೆಂದು ಬೊಬ್ಬಿರಿದರು. ಅದು ಕೇವಲ ಪತ್ರಿಕಾ ಹೇಳಿಕೆಯಾಗಿಯೇ ಉಳಿಯಿತು.

ಈಗ ಮಹಾರಾಷ್ಟ್ರ ಹೊತ್ತಿ ಉರಿಯಲು ಕಾರಣವಾಗಿರುವ 'ಲಾಲೂ ಬಿಹಾರ ಸಿದ್ಧಾಂತ' ಸ್ವಲ್ಪ ಸಮಯದ ಹಿಂದೆ ಕರ್ನಾಟಕದಲ್ಲೂ ಆಗಿತ್ತು. ನ್ಯಾಯಯುತ ಪ್ರತಿಭಟನೆ ನಡೆಸಿದ ಕನ್ನಡಿಗರನ್ನು ಜೈಲಿಗೆ ಕಳುಹಿಸಿ ರಾಜ್ಯ ಸರಕಾರ ಸುಮ್ಮನಾಯಿತು. ರೈಲ್ವೆಯ 'ಡಿ' ದರ್ಜೆ ನೌಕರರನ್ನು ಆಯಾ ರಾಜ್ಯಗಳಿಂದ ಆಯ್ಕೆ ಮಾಡಬೇಕೆಂಬುದು ಒತ್ತಾಯ. ಆದರೆ ಕರ್ನಾಟಕದ ಯಾವುದೇ ರೈಲು ನಿಲ್ದಾಣದಲ್ಲಿ ಕನ್ನಡದವರನ್ನು ನಾವು-ನೀವು ಎಷ್ಟು ನೋಡಿದ್ದೇವೆ? ಕರ್ನಾಟಕದ ರೈಲ್ವೇ ನಿಲ್ದಾಣಗಳಲ್ಲಿ ನಾವು ಮಲಯಾಳಂ, ತಮಿಳು ಮಾತನಾಡಬೇಕಾದ ಅನಿವಾರ್ಯತೆಯಿದೆಯೆಂದರೆ ನಮ್ಮ ಪರಿಸ್ಥಿತಿ ಹೇಗಿದೆ. ಇದೀಗ ದೇಶದೆಲ್ಲೆಡೆಯ ರೈಲ್ವೆ ಹುದ್ದೆಗಳಲ್ಲಿ ಬಿಹಾರಿಗಳನ್ನು ತುಂಬುತ್ತಿದ್ದರೂ ಪ್ರಮುಖ ವಿರೋಧ ಪಕ್ಷ ಬಿಜೆಪಿ ತುಟಿ ಪಿಟಿಕ್ಕೆನ್ನುತ್ತಿಲ್ಲ.

ಇನ್ನು ಕನ್ನಡ ಸಿನಿಮಾ ಮಂದಿಯ ವಿಚಾರಕ್ಕೆ ಬರೋಣ. ಇವರಿಗೆ ಕನ್ನಡ ಭಾಷೆಯ ಅಸ್ತಿತ್ವ ಬೇಕು. ಆದರೆ ನಾಯಕಿ, ಸಂಗೀತ ನಿರ್ದೇಶಕರು, ಹಾಡುಗಾರರು ಪರಭಾಷೆಯವರೇ ಬೇಕು. ಪರಭಾಷೆಯಿಂದ ಎರವಲು ಪಡೆದುಕೊಂಡು ರಿಮೇಕ್ ಚಿತ್ರ ಮಾಡಬೇಕು. ಆದರೆ ಅದಕ್ಕೆ ತೆರಿಗೆ ವಿನಾಯಿತಿ ನೀಡಬೇಕು. ಇದು ಕನ್ನಡದ ಕಲಾ ಸಾಮ್ರಾಟ್ ಬಿರುದಾಂಕಿತ ಎಸ್. ನಾರಾಯಣ್ ಮನವಿಯಾಗಿತ್ತು. ನ್ಯಾಯಾಲಯ ಕೂಡ ಇದಕ್ಕೀಗ ಸ್ಪಂದಿಸಿದೆ.

ಸಾಮಾನ್ಯ ಸಮಸ್ಯೆಗಳು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುಮಾರು ಶೇಕಡಾ 50ಕ್ಕೂ ಕಡಿಮೆ ಕನ್ನಡ ಭಾಷಿಕರಿದ್ದಾರೆ. ಐಟಿ, ಬಿಟಿ ವಲಯದಲ್ಲಿ ಕನ್ನಡದ ಬಗ್ಗೆ ಅವಹೇಳನಕಾರಿ ಕವನಗಳನ್ನು ಬರೆಯುವುದು, ಕನ್ನಡಿಗ ನೌಕರರನ್ನು ಹೀಯಾಳಿಸುವುದು ನಡೆಯುತ್ತಿರುತ್ತದೆ. ಹೊರರಾಜ್ಯಗಳಿಂದ ಬಂದ ಐಟಿ ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಮಂಗಳೂರು ಕನ್ನಡ ರಾಜ್ಯದ ಇತರೇ ಕನ್ನಡಿಗರಿಗೆ ಹಾಸ್ಯದ ವಸ್ತು. ಟೀವಿ, ಎಫ್‌ಎಂ ರೇಡಿಯೋಗಳು ಕನ್ನಡದ ಮೇಲೆ ಅತ್ಯಾಚಾರ ನಡೆಸುತ್ತಿವೆ. ಕನ್ನಡದ ಸಾಹಿತಿಗಳು ರಾಜಕೀಯ ಮಾಡುತ್ತಿದ್ದಾರೆ. ಸಾಹಿತ್ಯ ಸಮ್ಮೇಳನಗಳಿಗೆ ಬಂಡಾಯದ ಬಣ್ಣ ಬಳಿಯಲಾಗುತ್ತಿದೆ.

ಬೆಳವಣಿಗೆಗಳು: ಬೆಂಗಳೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಕಲಬುರ್ಗಿ ಮುಂತಾದ ನಗರಗಳ ಹೆಸರುಗಳನ್ನು ಕನ್ನಡೀಕರಣಗೊಳಿಸುವ ಯತ್ನ ಕೊನೆಯ ಹಂತದಲ್ಲಿದೆ. ಒಂದನೇ ತರಗತಿಯಿಂದಲೇ ಶಾಲೆಗಳಲ್ಲಿ ಇಂಗ್ಲೀಷ್ ಪಠ್ಯ ಆರಂಭಿಸುವ ಯೋಜನೆ ಪ್ರಾಥಮಿಕ ಹಂತದಲ್ಲಿದೆ. ವ್ಯಾವಹಾರಿಕ ಜಗತ್ತಿನಲ್ಲಿ ಕನ್ನಡಕ್ಕಿಂತ ಇಂಗ್ಲೀಷ್ ಹೆಚ್ಚು ಪ್ರಾಮುಖ್ಯತೆ ಪಡೆದಿರುವುದರಿಂದ ಇಂಗ್ಲೀಷ್ ಕಲಿಯಲೇ ಬೇಕಾದ ಅನಿವಾರ್ಯತೆಯಿದೆ.

ಕನ್ನಡದಲ್ಲಿ ಈಗಿರುವ ಶಬ್ದಗಳಲ್ಲಿ ಸುಮಾರು ಶೇಕಡಾ 5ರಿಂದ 10ರಷ್ಟು ಸಂಸ್ಕೃತ, ಇಂಗ್ಲೀಷ್, ಫ್ರೆಂಚ್, ಲ್ಯಾಟಿನ್ ಭಾಷೆಗಳಿಂದ ಬಂದವುಗಳು. ಹಾಗಾಗಿ ಯಾರಾದರೂ ಶುದ್ಧ ಕನ್ನಡದಲ್ಲಿ ಮಾತನಾಡಿದರೆ ಅದನ್ನು ಅರ್ಥ ಮಾಡಿಕೊಳ್ಳುವುದು ತುಸು ಕಷ್ಟ. ಆದರೂ ಈಗ ಶುದ್ಧ ಕನ್ನಡ ಒಂದು ಕಡೆ ಮಾತ್ರ ಕೇಳಿ ಬರುತ್ತಿದೆ. ಅದು ಮೊಬೈಲ್ ಫೋನ್ ಗ್ರಾಹಕರ ಕಾಳಜಿ ಕೇಂದ್ರದಲ್ಲಿ. "ನೀವು ಕರೆ ಮಾಡಿದ ವ್ಯಕ್ತಿ ಬೇರೆ ಕೆಲಸದಲ್ಲಿ ವ್ಯಸ್ತರಾಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ", "ನಮ್ಮ ಸೇವೆ ನಿಮಗೆ ತೃಪ್ತಿ ತಂದಿದೆಯೇ, ಬೇರೇನಾದರೂ ಮಾಹಿತಿ ಬೇಕಾಗಿತ್ತೇ?", "ಕರೆ ಮಾಡಿದ್ದಕ್ಕಾಗಿ ಧನ್ಯವಾದಗಳು"...

ಸಿರಿಗನ್ನಡಂ ಗೆಲ್ಗೆ... ಜೈ ಕರ್ನಾಟಕ ಮಾತೆ...
ಮತ್ತಷ್ಟು
ಭಾಷಾ ಹೋರಾಟಕ್ಕೂ ಬೇಕೆ ರಾಜಕೀಯ ವೇಷ...
ಕನ್ನಡದ ಮಕ್ಕಳೆಲ್ಲ ಒಂದಾಗಿ ನಿಲ್ಲಿ..
ಶಿಕ್ಷಣದ ವ್ಯಾಪಾರೀಕರಣ ತಾಳಿಕೊಂಡೀತೇ ಕನ್ನಡ?
ಕನ್ನಡದ ಬಗ್ಗೆ ತಾತ್ಸಾರ ಬೇಡ