ಮುಖ್ಯ ಪುಟ » ವಿವಿಧ » ರಾಜ್ಯೋತ್ಸವ » ಲೇಖನ » ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ! (Kannada | Classical Language | Karnataka | Dravida Language | Literature)
Feedback Print Bookmark and Share
 
ಅವರಲ್ಲಿ ಅಕ್ಷರಗಳ ಕೊರತೆಯಿರುವುದು ಕೂಡ ಇದಕ್ಕೆ ಪ್ರಧಾನ ಕಾರಣ. ಅದೇ ಕಾರಣಕ್ಕೆ ಅವರು ಹಿಂದಿಯನ್ನೂ, ಅದರ ದೇವನಾಗರಿ ಲಿಪಿಯನ್ನೂ ದ್ವೇಷಿಸುತ್ತಾರೆ. ವ್ಯಂಜನಾಕ್ಷರಗಳು ಕಡಿಮೆ ಇವೆಯಾದರೂ, ಅದನ್ನವರು ಹಲಂತ ಅಕ್ಷರಗಳಲ್ಲಿ ಸರಿದೂಗಿಸಿಕೊಂಡಿದ್ದಾರೆ. ಇಕ್, ಇಙ್, ಇಚ್, ಇಮ್ ಎಂಬಿತ್ಯಾದಿಯಾಗಿ ಅವರು ಉಚ್ಚರಿಸುತ್ತಾರೆ ಮತ್ತು ಈ ಅಕ್ಷರಗಳೂ ಅಲ್ಲಲ್ಲಿ ಕೂಡಿಕೆಯಾಗುತ್ತವೆ. ಅಕ್ಷರಗಳ ಸಂಖ್ಯೆ ಕಡಿಮೆ ಇದೆ ಎಂಬ ಮಾತ್ರಕ್ಕೆ ನೀವದನ್ನು ಶಾಸ್ತ್ರೀಯವಾಗಿ ಕಲಿಯಲು ಮುಂದಾದೀರೋ... ಗೊಂದಲದ ಸುಳಿಯಲ್ಲಿ ಸಿಲುಕುತ್ತೀರಿ. ಅಲ್ಲಿ ಬರೆವಣಿಗೆಯ ಭಾಷೆಗಿಂತಲೂ ಉಚ್ಚಾರದ ಭಾಷೆಗಿರುವ ಮಹತ್ವದಿಂದಾಗಿಯೇ ಅವರು ಜೀವನ ಮಾಡುತ್ತಾರೆ. ಪಾಪಿ ಎಂದರೆ ಭಾಭಿ ಅಂತ ಸಾಮಾನ್ಯವಾಗಿ ತಮಿಳು ಕಲಿತ ಅನ್ಯಭಾಷಿಗರು ಓದಿಕೊಳ್ಳಬಹುದು. ನಮ್ಮಂಥ ಹೊರಗಿನಿಂದ ಬಂದವರು ಈ ನಿಟ್ಟಿನಲ್ಲಿ ತಿಣುಕಾಡುವಷ್ಟು ಬೇರಾರೂ ತೊಂದರೆ ಪಟ್ಟುಕೊಳ್ಳಲಾರರು. ಹೀಗಾಗಿ ತಮಿಳನ್ನು ಅರಿತವರಿಗೆ, ಅದರ ಓದುವ ಸಂಸ್ಕೃತಿಯನ್ನು ರೂಢಿಸಿಕೊಂಡವರು ಮಾತ್ರವೇ ಯಾವುದೇ ಪದವಿನ್ಯಾಸವನ್ನು ಸರಿಯಾಗಿ ಓದಬಲ್ಲರು ಯಾ ಉಚ್ಚರಿಸಬಲ್ಲರು. ತಮಿಳಿನಲ್ಲಿ ಧ್ವನ್ಯಾತ್ಮಕ ಅಕ್ಷರಗಳ ಕೊರತೆಯಿಂದ ತಮಿಳರಲ್ಲದವರಿಗೆ ಉಂಟಾಗಬಹುದಾದ ಸಮಸ್ಯೆಯನ್ನು ಹೇಳುವುದಕ್ಕಷ್ಟೇ ಈ ವಿಷಯ ಇಲ್ಲಿ ಉಲ್ಲೇಖಿಸಿದ್ದೇ ಹೊರತು, ಆ ಭಾಷೆಯನ್ನು ದೂಷಿಸುವುದು ಉದ್ದೇಶವಲ್ಲ.

ಭಾಷೆ ಎಂಬುದು ತಮಿಳು ರಕ್ತದ ಕಣಕಣದಲ್ಲಿಯೂ ಸ್ವಲ್ಪ ಹೆಚ್ಚೇ ಎಂಬಷ್ಟರ ಮಟ್ಟಿಗೆ ಹರಿದಾಡುತ್ತಿದೆ. ನಮ್ಮದೇ ಮೇಲ್ಮಟ್ಟದ ಭಾಷೆ, ನಮ್ಮ ಭಾಷೆಗೆ ಬೇರೆ ಯಾರದೇ ಹಂಗಿಲ್ಲ, ಬೇರೆ ಭಾಷೆಗಳ ಶಬ್ದ ನಮಗೆ ಬೇಡ, ಉಚ್ಚಾರ ಬೇಡ ಎಂಬುದನ್ನು ಅವರು ಹೆಗ್ಗಳಿಕೆಯಿಂದಲೇ ಹೇಳಿಕೊಳ್ಳುತ್ತಾರೆ.

ಕನ್ನಡಕ್ಕೆ ಕ್ಲಾಸಿಕಲ್ ಪಟ್ಟಕ್ಕೆ ಕೇಂದ್ರ ಒಪ್ಪಿದೆ. (ಮದ್ರಾಸ್ ಹೈಕೋರ್ಟಿನಲ್ಲಿ ತಡೆಯಾಜ್ಞೆ ಹಾಗೆಯೇ ಇದೆ ಎಂಬುದು ಬೇರೆ ವಿಷಯ). ಈ ಕ್ಲಾಸಿಕಲ್ ಎಂಬುದಕ್ಕೆ ಸಂವಾದಿ ಪದವಾಗಿ 'ಶಾಸ್ತ್ರೀಯ' ಎಂಬುದು (ಶಾಸ್ತ್ರಬದ್ಧವಾದ ಎಂಬರ್ಥ) ಸರಿಯೇ ಅಥವಾ ಅದನ್ನು 'ಅಭಿಜಾತ' ಭಾಷೆ ಎಂದು ಭಾಷಾಂತರಿಸಬೇಕೇ ಎಂಬ ಬಗೆಗೂ ವಾಗ್ವಿವಾದಗಳಿವೆ. ಇವನ್ನೆಲ್ಲಾ ಒತ್ತಟ್ಟಿಗಿಟ್ಟರೆ, ಒಕ್ಕೂಟ ವ್ಯವಸ್ಥೆಯಲ್ಲಿ ಸಮಾನತೆ ಬೇಕು, ಈ ಕಾರಣಕ್ಕೆ ತಮಿಳಿಗೆ ನಾಲ್ಕು ವರ್ಷಗಳ ಹಿಂದೆಯೇ ಅದರ ಕಣ್ಣಿಗೆ ಬೆಣ್ಣೆ, ಕನ್ನಡದ ಕಣ್ಣಿಗೆ ಸುಣ್ಣ ಎಂಬಂಥ ತಾರತಮ್ಯ ಮಾಡಿದ್ದೇಕೆ? ಎಂಬುದರ ಹಿಂದೆ ಹೋದರೆ ರಾಜಕೀಯ ಕಾರಣಗಳೇ ಢಾಳಾಗಿ ಕಾಣಿಸುತ್ತವೆ.

ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದು ಹೇಗೆ? ಈ ಕುರಿತು ನಾವೂ ಒಂದಷ್ಟು ವಿಚಾರಗಳನ್ನು ಅರಿತುಕೊಳ್ಳಬೇಕು. ಇದಕ್ಕೆ ರಾಜಕೀಯ ಕಾರಣವೂ ಇದೆ. ಕೇಂದ್ರದಲ್ಲಿ ಯಾರೇ ಅಧಿಕಾರಕ್ಕೆ ಬರಲಿ, ರಾಜ್ಯದಲ್ಲಿರುವ ಸರಕಾರವು ಅವರ ಜೊತೆ ಕೈಜೋಡಿಸಿ, ಕೇಂದ್ರದ ಸರಕಾರ ಸೇರಿಕೊಂಡು ತಮಿಳನ್ನು, ತಮಿಳುನಾಡನ್ನು ವಿಶ್ವಭೂಪಟದಲ್ಲಿ ಮೇಲೆತ್ತುವಲ್ಲಿ ಸಮರ್ಥರಾಗಿರುತ್ತಾರೆ. ಇದೊಂಥರಾ ಬೇಳೆ ಬೇಯಿಸಿಕೊಳ್ಳುವ ವಿಧಾನ ಅಂತ ನಾವು ಹೀಯಾಳಿಸಿದರೂ, ತಮಿಳುನಾಡು ಮತ್ತು ಅವರ ಭಾಷೆ ಸಾಕಷ್ಟು ಮಟ್ಟಿಗೆ ಅಭಿವೃದ್ಧಿಯಾಗಿರುವುದು ಇದೇ ಕಾರಣಕ್ಕೆ ಎಂಬುದರಲ್ಲಿ ಎರಡು ಮಾತಿಲ್ಲ.

ಹಾಗಿದ್ದರೆ ಕರ್ನಾಟಕದಲ್ಲಿ?
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷವು ರಾಜ್ಯದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿರುತ್ತದೆ, ರಾಜಕೀಯ ಕಟ್ಟುಪಾಡುಗಳಿಂದಾಗಿ (ಕ್ರೆಡಿಟ್ ಹೋಗುತ್ತದೆ ಎಂಬ ಕಾರಣಕ್ಕೆ) ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಕನ್ನಡಕ್ಕಾಗಿ ಒಟ್ಟಾಗಿ ಕೈಯೆತ್ತುವಲ್ಲಿ, ಕೈಜೋಡಿಸುವಲ್ಲಿ ವಿಫಲರಾಗುತ್ತಾರೆ. ಕಳೆದ ವರ್ಷ ನಡೆದ ವಿದ್ಯಮಾನಗಳನ್ನೇ ಗಮನಿಸಿ. ಶಾಸ್ತ್ರೀಯ ಭಾಷೆ ಸ್ಥಾನ ಮಾನ ಕೊಡಿಸಿ ಎಂದು ಕೇಂದ್ರವನ್ನು ಕೋರಲು ತೆರಳುವ ನಿಯೋಗದಲ್ಲಿ "ನಾ ಬರುವುದಿಲ್ಲ, ತಾ ಬರುವುದಿಲ್ಲ" ಎಂದು ಹೇಳುವ ಪಕ್ಷಗಳು, ಒಗ್ಗಟ್ಟು ಪ್ರದರ್ಶಿಸುವಲ್ಲಿ ವಿಫಲವಾಗಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಇದರ ಮಧ್ಯೆಯೇ, ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಒತ್ತಾಯದ ಹೋರಾಟ ತೀವ್ರವಾಗುತ್ತಿದೆ, ಇದು ರಾಜ್ಯದಲ್ಲಿ ಅಧಿಕಾರಕ್ಕಿರುವ ಪಕ್ಷಕ್ಕೆ ದೊಡ್ಡ ಆಯುಧವಾಗುತ್ತದೆ ಎಂದು ಮನಗಂಡ ಕೇಂದ್ರದ ಸರಕಾರವು, ದಿಢೀರ್ ಆಗಿ ಶಾಸ್ತ್ರೀಯ ಸ್ಥಾನಮಾನ ಘೋಷಿಸಿಬಿಟ್ಟಿತು. ಇದು ರಾಜಕೀಯದ ಅತ್ಯಂತ ದೊಡ್ಡ ಉದಾಹರಣೆಯಾದರೂ ಇಲ್ಲಿ ಕನ್ನಡಕ್ಕೆ ಲಾಭವಾಯಿತು ಎಂದು ಹೇಳಿಕೊಳ್ಳಲಡ್ಡಿಯಿಲ್ಲ. ಅಲ್ಲವೇ?

ಕೊನೆಗೊಂದು ಮಾತು. ಭಾರತೀಯ ಭಾಷೆಗಳಲ್ಲಿರುವ ಧ್ವನಿ ವೈವಿಧ್ಯವನ್ನು ಅತ್ಯಂತ ಸಮರ್ಪಕವಾಗಿ ಬಿಂಬಿಸಬಲ್ಲ ತಾಕತ್ತು ಕನ್ನಡದ ಅಕ್ಷರಗಳಿಗಿದೆ ಎಂಬುದಂತೂ ಎಲ್ಲರೂ ಒಪ್ಪತಕ್ಕ ವಿಚಾರ. ಬೇರೆಯದಕ್ಕೆ ನಮ್ಮ ಭಾಷೆಯ ಹೋಲಿಕೆ ಬೇಡ, ನಮ್ಮ ಭಾಷೆಯನ್ನು ನಾವೇ ಉತ್ತುಂಗಕ್ಕೇರಿಸೋಣ. "ಕುರಿತೋದುದೆಯುಂ ಕಾವ್ಯಪ್ರಯೋಗಪರಿಣತ ಮತಿ"ಗಳಾಗಿರುವ ಕನ್ನಡಿಗರ ಸಿರಿ ಕನ್ನಡವನ್ನು ಮತ್ತಷ್ಟು ಸುಪುಷ್ಟವಾಗಿಸಲು ಪೂರ್ವಗ್ರಹರಹಿತ, ಸಂಘಟಿತ ಪ್ರಯತ್ನ ಮಾಡೋಣ. ಕನ್ನಡ ಉಲಿಯುವ ಬಗ್ಗೆ ಹೆಮ್ಮೆ ಪಡೋಣ, ಕನ್ನಡವನ್ನು ಮತ್ತಷ್ಟು ಸಮೃದ್ಧವಾಗಿಸೋಣ, ಕನ್ನಡದ ರಾಜ್ಯೋತ್ಸವವನ್ನು ನಿತ್ಯೋತ್ಸವವಾಗಿಸೋಣ.

ವೆಬ್‌ದುನಿಯಾದ ಸಮಸ್ತ ಓದುಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಜೈ ಕನ್ನಡಾಂಬೆ.
 
ಸಂಬಂಧಿತ ಮಾಹಿತಿ ಹುಡುಕಿ