ಮುಖ್ಯ ಪುಟ » ವಿವಿಧ » ವೆಬ್‌ದುನಿಯಾ ವಿಶೇಷ-09 » ವರ್ಷ-09 » ನೆನ್ನೆಗಳನ್ನು ಮರೆತು ನಾಳೆಗಳ ಕನಸು ಕಾಣಿರಿ (Happy New Year)
Bookmark and Share Feedback Print
 
ಗುಣವರ್ಧನ್ ಶೆಟ್ಟಿ
PTI
"ಹೊಸ ವರುಷವು ಬಂದಿದೆ, ಹರುಷವ ತಂದಿದೆ" ಎಂದು ನವ ವರುಷವನ್ನು ಬರಮಾಡಿಕೊಳ್ಳುವ ಮೊದಲಿಗೆ, ಈಗಿನ ಪರಿಸ್ಥಿತಿಯತ್ತ ಒಂದಷ್ಟು ಮುನ್ನೋಟ ಹರಿಸಿದರೆ, ಈಗಿನ ಸ್ಥಿತಿಯಲ್ಲಿ ಜನಸಾಮಾನ್ಯರು ಯಾವುದೇ ಆಶಾಭಾವನೆ ಇಟ್ಟುಕೊಂಡು ಮುಂದಿನ ವರ್ಷದ ನಿರೀಕ್ಷೆಯಲ್ಲಿರುವುದೂ ಕಷ್ಟ. ಆತಂಕದ ಕಾರ್ಮೋಡದಲ್ಲಿ, ಮಾನಸಿಕ ಗೊಂದಲದ ಸ್ಥಿತಿಯಲ್ಲಿರುವ ಜನರು ಹೊಸ ವರ್ಷವನ್ನು ಯಾವ ರೀತಿಯಲ್ಲಿ ಬರಮಾಡಿಕೊಳ್ಳಬಲ್ಲರು?

ಆರ್ಥಿಕ ಹಿನ್ನಡೆಯ ಕಾರ್ಮೋಡದಲ್ಲೂ ಬದುಕಿನ ಬಗ್ಗೆ ಭವ್ಯ ಕಲ್ಪನೆಗಳನ್ನು ಇರಿಸಿಕೊಂಡರೆ, ಸಕಾರಾತ್ಮಕ ಚಿಂತನೆಗಳೊಂದಿಗೆ, ಆತ್ಮವಿಶ್ವಾಸದೊಂದಿಗೆ ಗುರಿಯ ಹಾದಿಯಲ್ಲಿ ಸಾಗಿದರೆ ಕಾರ್ಮೋಡವು ಕರಗಿ ಬೆಳಕಿನಹೊಂಗಿರಣಗಳನ್ನು ಮ‌ೂಡಿಸುವುದರಲ್ಲಿ ಸಂಶಯವಿಲ್ಲ.

ಪ್ರತಿ ಬಾರಿ ಹೊಸ ವರ್ಷ ಬಂದಾಗಲೂ ಈ ವರ್ಷವಾದರೂ ತಾವು ಜೀವನದಲ್ಲಿ ಪ್ರಗತಿ ಹೊಂದಬೇಕು ಎನ್ನುವ ಆಕಾಂಕ್ಷೆ ಎಲ್ಲರಲ್ಲೂ ಇರುವುದು ಸಹಜ. ಆದರೆ ಜೀವನದಲ್ಲಿ ಏಳಿಗೆ ಸಾಧಿಸಬೇಕಾದರೆ ಏನಾದರೂ ಗುರಿ ಇಟ್ಟುಕೊಂಡಿರಬೇಕಲ್ಲವೇ? ಆ ಗುರಿಯತ್ತ ಏಕಮುಖವಾಗಿ, ಏಕಾಗ್ರಚಿತ್ತರಾಗಿ ತನು, ಮನವನ್ನು ಅರ್ಪಿಸಿ ಹೆಜ್ಜೆಇಟ್ಟಾಗಲೇ ಈಡೇರಬಹುದು.

ಕಳೆದ ವರ್ಷದ ನಮ್ಮ ಸಾಧನೆ ಬಗ್ಗೆ ಹಿನ್ನೋಟ ಹರಿಸಿ ಆತ್ಮಾವಲೋಕನ ಮಾಡಿಕೊಂಡು ಮುಂದಿನ ವರ್ಷಕ್ಕೆ ತಾವು ಏನೇನು ಮಾಡಬೇಕು ಎಂದು ಪಟ್ಟಿಮಾಡಿಕೊಂಡು ಆ ಗುರಿಗಳ ಈಡೇರಿಕೆಗೆ ಕಾರ್ಯೋನ್ಮುಖವಾದರೆ ಶೇ.25ರಷ್ಟಾದರೂ ಗುರಿಗಳು ಈಡೇರುವುದರಲ್ಲಿ ಸಂಶಯವಿಲ್ಲ.

ಕೆಲವರು ಜೀವನದಲ್ಲಿ ಪ್ರಗತಿಪಥದಲ್ಲಿ ಸಾಗಿ, ಇನ್ನೂ ಕೆಲವರು ಜೀವನಯಾತ್ರೆಯಲ್ಲಿ ಸೋಲನುಭವಿಸಲು ಕಾರಣವೇನೆಂದು ವಿಶ್ಲೇಷಣೆ ಮಾಡಿದರೆ ಯಾವುದೇ ಗೊತ್ತುಗುರಿ ಇಲ್ಲದೇ, ಲಂಗುಲಗಾಮಿಲ್ಲದೇ ಜೀವನ ಸಾಗಿಸುತ್ತಿರುವುದೇ ಕಾರಣವೆಂದರೆ ತಪ್ಪಾಗಲಾರದು.

"ಛೇ, ಹಾಗೇ ಮಾಡಿದ್ದರೆ ಚೆನ್ನಾಗಿತ್ತು, ಹೀಗೆ ಮಾಡಿದ್ದರೆ ಚೆನ್ನಾಗಿತ್ತು" ಎಂದು ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು ಭೂತಕಾಲದ ಕಹಿಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಚಿಂತೆಯ ಚಿತೆಯಲ್ಲಿ ಬೇಯುತ್ತಾ, ಭವಿಷ್ಯವನ್ನು ಹಾಳುಮಾಡಿಕೊಳ್ಳುವ ಜನರು ನಮ್ಮನಡುವೆ ಇರುತ್ತಾರೆ. ಭವಿಷ್ಯದ ಬಗ್ಗೆ ಭವ್ಯ ಕಲ್ಪನೆಗಳನ್ನು ಇರಿಸಿಕೊಂಡು ನಿನ್ನೆ, ಮೊನ್ನೆಗಳ ಕಹಿಗಳನ್ನು ಮರೆತು ನಾಳೆಗಳ ಸಿಹಿಯನ್ನು ಕಲ್ಪಿಸಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಭವಿಷ್ಯ ಹಸನಾಗುವುದರಲ್ಲಿ ಸಂಶಯವಿಲ್ಲ.

ನಕಾರಾತ್ಮಕ ಚಿಂತನೆಗಳನ್ನು ಬಿತ್ತುವ, ನಿರಾಶಾವಾದಿ ಜನರ ಮಾತಿಗೆ ಕಿವಿಗೊಡದೇ ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡು, ಹೊಸ ವರ್ಷದಲ್ಲಿ ಏನಾದರೂ ಸಾಧನೆ ಮಾಡುತ್ತೇನೆಂದು ಆತ್ಮವಿಶ್ವಾಸದೊಂದಿಗೆ, ಆಶಾವಾದಿಯಾಗಿ ಮುಂದಡಿಇಟ್ಟರೆ ಬೆಳಕಿನ ಆಶಾಕಿರಣ ಮ‌ೂಡಬಹುದು.

ಇನ್ನೂ ಕೆಲವರು ಹೊಸ ವರ್ಷಕ್ಕೆ ಗುರಿಗಳನ್ನು ಇಟ್ಟುಕೊಂಡು ಕಾರ್ಯೋನ್ಮುಖರಾಗಿ ಆರಂಭಶೂರತ್ವದಂತೆ ಬಳಿಕ ಅವುಗಳನ್ನು ಮರೆತು, ಮತ್ತೊಂದು ವರ್ಷ ಕಾಲಿರಿಸಿದಾಗ ತಮ್ಮ ಸಾಧನೆಯ ಕಡೆ ಹಿನ್ನೋಟ ಹರಿಸಿ ಸಾಧನೆ ಶೂನ್ಯವೆಂದು ಕಂಡುಬಂದಾಗ ನಿರಾಶಾವಾದಿಗಳಾಗುವ ಬದಲಿಗೆ, ಗುರಿಯತ್ತ ತನ್ಮಯತೆಯಿಂದ, ದೃಢಚಿತ್ತದಿಂದ ಹೆಜ್ಜೆಇರಿಸಿದರೆ, ಅವುಗಳ ಅನುಷ್ಠಾನಕ್ಕೆ ಅವಿರತ ಶ್ರಮಿಸಿದರೆ ಮುಳ್ಳಿನ ಹಾದಿ ಕಳೆದು ಸಾಧನೆಯ ಶೃಂಗ ಮುಟ್ಟುವುದರಲ್ಲಿ ಸಂಶಯವಿಲ್ಲ. ನಿನ್ನೆಗಳನ್ನು ಮರೆತು, ನಾಳೆಗಳನ್ನು ನೆನೆನೆನೆದು, ಕಲ್ಪನೆಯ ಕನಸುಗಳನ್ನು ಹೊಸೆದು, ಅವುಗಳ ಸಾಕಾರದತ್ತ ಸಾಗಿದರೆ ಜೀವನ, ಆಗುವುದು ಪಾವನ.

ಹೊಸ ವರುಷಕ್ಕೆ ಹೊಸ ಕನಸುಗಳ ಬೀಜ ಬಿತ್ತುತ್ತಾ,
ಆ ಕನಸುಗಳಿಗೆ ನೀರೆರೆದು ಪೋಷಿಸುತ್ತಾ,
ಗಿಡವಾಗಿ, ಮರವಾಗಿ ಭರ್ತಿ ಫಲ ಬಿಟ್ಟರೆ
ಮನಸು ಗರಿಗೆದರಿ ನವಿಲಿನಂತೆ ಕುಣಿವುದು.
ಸಂಬಂಧಿತ ಮಾಹಿತಿ ಹುಡುಕಿ