ಮುಖ್ಯ ಪುಟ » ವಿವಿಧ » ವೆಬ್‌ದುನಿಯಾ ವಿಶೇಷ-09 » ವರ್ಷ-09 » ಹೊಸ ಕಾಲಚಕ್ರಕ್ಕೆ ಆದರದ ಸ್ವಾಗತ.... (Happy New Year)
Bookmark and Share Feedback Print
 
ನಾಗೇಂದ್ರ ತ್ರಾಸಿ
PTI
ಅಬ್ಬಾ ಅದೆಷ್ಟು ಬೇಗ ವರ್ಷ ಕಳೆಯಿತು ಎಂಬ ಅಚ್ಚರಿಯ ಉದ್ಘಾರ ಹೊರಹೊಮ್ಮುತ್ತೆ...ಇದು ಕೇವಲ ಈ ವರ್ಷದ ಕಥೆಯಲ್ಲ. ಪ್ರತಿ ಬಾರಿಯೂ ಮರುಕಳಿಸುವ ಪ್ರಕ್ರಿಯೆ. ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬ ಕವಿವಾಣಿಯ ಹಾಗೆ.... ಹೊಸ ವರ್ಷ ಎಂದಾಕ್ಷಣ ಅದೆನೋ ಸಂಭ್ರಮ ಪಡುತ್ತೇವೆ.

ಅದು ಸಂಭ್ರಮವೋ....ಸಂತಸವೋ....ವಿಷಾದವೋ...ನೋವೋ...ನಲಿವೋ..ಅಂತೂ ಹ್ಯಾಪಿ ನ್ಯೂ ಇಯರ್, ಹೊಸ ವರ್ಷದ ಶುಭ ಕಾಮನೆಗಳನ್ನು ಹೊಸ ವರ್ಷದಂದು ಒಬ್ಬೊಬ್ಬರಿಗೊಬ್ಬರು ಹೇಳುವುದು ವಾಡಿಕೆ. ಗೋಡೆಯ ಮೇಲೆ ನೇತು ಹಾಕಿದ್ದ ಕ್ಯಾಲೆಂಡರ್ ಜಾಗದಲ್ಲಿ ಮತ್ತೊಂದು ಕ್ಯಾಲೆಂಡರ್ ಸದ್ದಿಲ್ಲದೆ ಬಂದು ಸೇರಿರುತ್ತೆ!.

ಡಿಸೆಂಬರ್ 31ರ 12ಗಂಟೆಯ ನಂತರ ಹೊಸ ವರ್ಷಕ್ಕೆ ಕಾಲಿಡುತ್ತೇವೆ, ಆಗ ಸಂಗೀತ ರಸಮಂಜರಿ, ವಿವಿಧ ಕಾರ್ಯಕ್ರಮಗಳು ಆಚರಿಸುವ ಮೂಲಕ ಹಲವರು ಸಂಭ್ರಮಿಸಿದರೆ. ಇನ್ನೂ ಕೆಲವರು ಪ್ರಸಿದ್ಧ ಬೀಜ್‌ಗಳಲ್ಲಿ ಕುಡಿದು-ಕುಣಿದು ಕುಪ್ಪಳಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ.

ಆದರೆ ಒಂದೆಡೆ ಮೌನವಾಗಿ ನಮ್ಮೊಳಗೆ ಚಿಂತನ-ಮಂಥನ ನಡೆಸಿದಾಗ ದಿಗಿಲು ಹುಟ್ಟಿಸುತ್ತೆ...ಅಬ್ಬಾಬ್ಬಾ ಎಷ್ಟು ಬೇಗ ವರುಷಗಳು ಸಂದು ಹೋಗುತ್ತಿವೆ ಎಂಬ ಧಾವಂತಕ್ಕೆ ಒಳಗಾಗುತ್ತೇವೆ. ನಿಜಕ್ಕೂ ಇಷ್ಟು ವರ್ಷಗಳವರೆಗೆ ಕಾಲಚಕ್ರವನ್ನು ಸವೆಸುತ್ತಾ, ಸವೆಸುತ್ತಾ ಅಂದುಕೊಂಡಿದ್ದನ್ನು ಸಾಧಿಸಿದ್ದೇವಾ? ಈ ಜಂಜಾಟ, ಒತ್ತಡ, ಪೈಪೋಟಿಗಳ ನಡುವೆ ಯಶಸ್ಸು ಸಾಧಿಸುತ್ತೇವಾ...ಅದೆಷ್ಟು ಕನಸುಗಳನ್ನು ಹೊತ್ತಿರುತ್ತೇವೆ ಅವೆಲ್ಲ ಸದ್ದಿಲ್ಲದೇ ಕಾಲಗರ್ಭದೊಳಗೆ ಹೂತುಹೋಗಿದೆಯಲ್ಲಾ ಎಂಬ ಭಾವ ನಮ್ಮನ್ನು ಅಧೀರರನ್ನಾಗಿಸುತ್ತದೆ.

ಕಾಲವನ್ನು ತಡೆಯೋರು ಯಾರು ಇಲ್ಲ ಎಂಬಂತೆ, ಕಾಲಚಕ್ರ ಉರುಳುತ್ತಲೇ ಸಾಗುತ್ತದೆ..ಎಲ್ಲದರ ವಿಮರ್ಶೆ ಮಾಡಿಕೊಳ್ಳುವ ಹಾಗೇ ನಮ್ಮನ್ನು ನಾವು ವಿಮರ್ಶೆಗೊಡ್ಡಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿನ ಏಣಿ ಏರಬೇಕಾದರೆ ಇಚ್ಛಾ ಶಕ್ತಿ ಅಗತ್ಯವಾಗಿದೆ. ಸಮುದ್ರ-ಹೊಳೆಗಳಲ್ಲಿನ ಅಲೆಗಳ ಏರಿಳಿತದಂತೆ, ಜೀವನ ಚಕ್ರದಲ್ಲೂ ಏರಿಳಿತಗಳೂ ಸಾಮಾನ್ಯ. ಈ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ನೋವು ತಂದ ಘಟನೆಗಳೇ ಹೆಚ್ಚು. ಎಲ್ಲೆಲ್ಲೂ ಸ್ಫೋಟ, ನಕ್ಸಲೀಯರ ಅಟ್ಟಹಾಸ, ಜಾಗತಿಕ ಆರ್ಥಿಕ ಕುಸಿತವಂತೂ ಐಟಿ-ಬಿಟಿ ಸೇರಿದಂತೆ ಮಾಧ್ಯಮರಂಗದವರೆಗೂ ಎಲ್ಲರೊಳಗೊಂದು ಅತಂತ್ರ ಸ್ಥಿತಿಯನ್ನು ಮೂಡಿಸಿದ್ದಂತೂ ಸತ್ಯ.

ಹಳೇ ಮನುಷ್ಯನ ಸುಡುವಿಕೆ:
ಹೊಸ ವರುಷದ ಬರಮಾಡಿಕೊಳ್ಳುವಿಕೆ ಅಂಗವಾಗಿ ಹೆಚ್ಚಿನೆಡೆ ಹಳೇ ಮನುಷ್ಯನ ಆಕೃತಿಯನ್ನು ಮಾಡಿ ಅದಕ್ಕೆ ಹಳೇ ಪ್ಯಾಂಟು, ಶರ್ಟು ತೊಡಿಸಿ, ತಲೆಗೊಂದು ಮಡಿಕೆ ಹಾಕಿ, ಅದರೊಳಗೆ ಪಟಾಕಿ ತುಂಬಿಟ್ಟು ರಾತ್ರಿ 12ಗಂಟೆ ಆಗುತ್ತಿದ್ದಂತೆಯೇ ಅದಕ್ಕೆ ಬೆಂಕಿ ಹಚ್ಚುವುದೊಂದು ಸಂಪ್ರದಾಯ. ಪಟಾಕಿಯ ಅಬ್ಬರದ ಸದ್ದಿನೊಂದಿಗೆ ಹಳೇ ಮನುಷ್ಯ ಕಣ್ಣೆದುರೇ ಜೀವಂತವಾಗಿ ದಹನವಾಗುವ ಮೂಲಕ ಹಳೆಯ ವೈಮನಸ್ಸು, ನೋವು, ಅಸೂಯೆ, ಕುಡಿತ ಸೇರಿದಂತೆ ಎಲ್ಲ ಕೆಟ್ಟ ದುರ್ಗುಣಗಳು ಅಗ್ನಿಗಾಹುತಿಯಾಗಿ ಹೊಸ ಕಾಲಚಕ್ರದೊಳಗೆ ಪ್ರವೇಶಿಸುತ್ತೇವೆ ಎಂಬುದರ ಸಂಕೇತ ಇದಾಗಿದೆ. (ಆದರೆ ಹಳೇ ಮನುಷ್ಯನನ್ನು ಸುಡುವುದಕ್ಕೆ ಇತ್ತೀಚೆಗೆ ಕೆಲವೆಡೆ ಟೀಕೆಗಳು ಕೇಳಿಬಂದಿತ್ತು. ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ಗೌರವ ಕೊಡುವುದು ಸಂಪ್ರದಾಯ, ಆದರೆ ಅದನ್ನು ಬಿಟ್ಟು ಹಳೇ ಮನುಷ್ಯನನ್ನು ಸುಟ್ಟು ಸಂಭ್ರಮಪಡುವುದು ಸರಿಯಲ್ಲ ಎಂಬ ವಾದ ಇದೆ).

ಏನೇ ಟೀಕೆ-ಟಿಪ್ಪಣಿಗಳಿರಲಿ ನೋವು-ನಲಿವು ಜೀವನದಲ್ಲಿ ಹಾಸು ಹೊಕ್ಕಾಗಿರುವಂತಾದ್ದು, ಜೀವನ ಹರಿಯುವ ನೀರಿದ್ದಂತೆ.... ಆ ನೆಲೆಯಲ್ಲಿ ಹೊಸ ವರ್ಷಕ್ಕೆ ನಲ್ಮೆಯ, ಆದರಪೂರ್ವಕ ಸ್ವಾಗತ.....
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹೊಸವರ್ಷ, ಕಾಲಚಕ್ರ, ಕವಿವಾಣಿ