ಇವಳೇ ನನ್ನ ಜೀವ, ಇವಳಿಂದಲೇ ನನ್ನ ಜೀವನ ಎಂದು ಭ್ರಮಿಸಿ ಎಲ್ಲವನ್ನೂ ಬಿಟ್ಟು ಹಿಂದೆ ಹೋದಾಗ, ಮೀನಾಳ ಸ್ಪಷ್ಟವಾದ ಪ್ರೇಮ ನಿರಾಕರಣೆಯಿಂದ ನೊಂದ ಮನಸ್ಸಿನೊಂದಿಗೆ ನಾನು, ನನ್ನ ಪಾಲಿಗೆ ಪಂಚಾಮೃತವಾಗಿ ಬಂದ ನನ್ನ ಕೆಲಸದ ಬಗ್ಗೆ ಹೆಚ್ಚೆಚ್ಚು ಗಮನ ಕೊಡಲಾರಂಭಿಸಿ, ನನ್ನ ತತ್ವ ಆದರ್ಶಗಳಿಗೆ ಅಂಟಿಕೊಂಡು ಬಿಟ್ಟಿದ್ದೆ. ವೃತ್ತಿ ಜೀವನದಲ್ಲಿ ಬಂದ ಹಲವಾರು ಸಮಸ್ಯೆಗಳಿಗೆ ಥಟ್ಟಂತ ಪರಿಹಾರ ಕಂಡು ಹಿಡಿದು, ಕೆಲವರು, ಹಲವಾರು ವರ್ಷಗಳಿಂದ ನಡೆಸುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿ, ಆ ನೆಪದಲ್ಲಿ, ಪೊಲೀಸು, ಕೋರ್ಟು, ಕಛೇರಿ ಎಲ್ಲಾ ನೋಡಿ, ಮಂಜುನಾಥ ಎಂದರೆ ಅವನೊಬ್ಬ ನಿರ್ದಯಿ, ಸಣ್ಣ ತಪ್ಪುಗಳಿಗೂ ಸಿಡುಕುವ ಕಟುಕ ಎನ್ನುವ ಮಟ್ಟಕ್ಕೆ ಬಂದು ನಿಂತು ಬಿಟ್ಟೆ.
ಪ್ರೀತಿ, ಪ್ರೇಮ, ಮಮಕಾರ, ವಾತ್ಸಲ್ಯ, ಕರುಣೆ ಇವೆಲ್ಲಾ ನನ್ನ ವೃತ್ತಿ ಜೀವನದ ಪದಕೋಶದಿಂದ ಕಣ್ಮರೆಯಾಗಿ ಬಿಟ್ಟಿದ್ದವು. ಆಗ ನನ್ನ ಮುಂದಿದ್ದದ್ದು ಏನಿದ್ದರೂ, ಕೆಲಸ, ಅದಕ್ಕೆ ಸಂಬಂಧಿಸಿದ ಕಾನೂನುಗಳು, ರೀತಿ ರಿವಾಜುಗಳು ಅಷ್ಟೇ! ಅವುಗಳ ಮುಂದೆ ನಾನು ಬೇರೆ ಯಾವುದೇ ಸಂಬಂಧಕ್ಕೂ ಬೆಲೆ ಕೊಡದ ಕಲ್ಲು ಬಂಡೆಯಾಗಿ ಬಿಟ್ಟೆ. ಆದರೆ, ಆ ನಿರ್ದಯಿ ಮನಃಸ್ಥಿತಿ ಹಲವಾರು ರೀತಿಯಲ್ಲಿ ಉತ್ತಮ ಫಲಿತಾಂಶಗಳನ್ನೇ ನೀಡಿ, ವೃತ್ತಿ ಜೀವನದಲ್ಲಿ ನನಗೇ ಗೊತ್ತಿಲ್ಲದಂತೆ, ನನ್ನನ್ನು ಮೇಲೆ ತಂದು ನನ್ನದೇ ಆದ ಐಡೆಂಟಿಟಿಯನ್ನು ಸೃಷ್ಟಿಸಿಬಿಟ್ಟಿತು!
ಹೀಗೇ ಒಮ್ಮೆ, ಆಯುಧಪೂಜೆಯ ಸಿಹಿಯ ಡಬ್ಬದೊಂದಿಗೆ ತಿಪಟೂರಿಗೆ ಬಂದವನು ಅಪ್ಪ - ಅಮ್ಮನ ನಿರ್ಭಾವುಕ ಮುಖಗಳನ್ನು ನೋಡಲಾಗದೆ ಸೀದಾ ಹೋಗಿದ್ದು ಅಕ್ಕನ ಮನೆಗೆ. ಅಲ್ಲಿ ಅವಳ ಮಕ್ಕಳ ಜೊತೆ ಸಿಹಿ ಸಿಹಿ ಮಾತುಗಳೊಂದಿಗೆ ದಿನ ಕಳೆಯುತ್ತಿದ್ದಾಗ ಅಕ್ಕ ಒಮ್ಮೆ ಕೇಳಿದಳು, "ಏನಾಯ್ತೋ, ನಿನ್ನ ಪ್ರೇಮಕಥೆ!".
ಅವಳಿಗೆ ನನ್ನ-ಮೀನಾಳ ಪ್ರೇಮ ಕಥೆಯ ಬಗ್ಗೆ ಅಷ್ಟಿಷ್ಟು ಗೊತ್ತಿತ್ತು, ಯಾರಾದರೊಬ್ಬರು ಆ ಬಗ್ಗೆ ಏನಾಯ್ತೆಂದು ಕೇಳಿದರೆ ಸಾಕೆಂದು ಕಾದಿದ್ದ ಮನ, ಥಟಕ್ಕನೆ ಅವಳಿಗೆ ನಡೆದ ಕಥೆಯನ್ನೆಲ್ಲಾ, ನನ್ನ ಆಣತಿಯನ್ನೂ ಮೀರಿ, ಎಲ್ಲವನ್ನೂ ಹೇಳಿ ಬಿಟ್ಟಿತ್ತು. ನೊಂದುಕೊಂಡ ಅವಳು, "ಯಾವುದಕ್ಕೂ ಹೆದರದೆ ಯಾವಾಗಲೂ ಎಲ್ಲದಕ್ಕೂ ಸೈ ಎಂದು ಮುಂದೆ ನುಗ್ಗುತ್ತಿದ್ದ ನಿನಗೆ ಈ ರೀತಿಯ ಸೋಲಾಗಬಾರದಿತ್ತು, ಆದರೂ ನನಗೆ ನಂಬಿಕೆಯಿದೆ, ನೀನು ಈ ಸೋಲಿನಿಂದ ಹೊರಬಂದು ಜೀವನದಲ್ಲಿ ಗೆಲ್ಲುವೆ" ಎಂದವಳ ಮಾತು ಮನಕ್ಕೆ ಸ್ವಲ್ಪ ಹರುಷ ನೀಡಿತ್ತು. ಶುಭ ಹಾರೈಸಿದ ಅಕ್ಕನಿಂದ ಬೀಳ್ಕೊಂಡು ಮತ್ತೆ ಬೆಂಗಳೂರಿನ ಯಾಂತ್ರಿಕ ಜೀವನಕ್ಕೆ ಮರಳಿದೆ.
ಕೆಲ ಸಮಯದ ನಂತರ ಮತ್ತೆ ಬಂದರು ಅಪ್ಪ, ನನ್ನನ್ನು ಹುಡುಕಿಕೊಂಡು. ಆಯುಧಪೂಜೆಯ ನಂತರ ಅಕ್ಕ, ಅಪ್ಪ, ಅಮ್ಮನ ನಡುವೆ ಅದೇನೇನು ಮಾತುಕತೆ ನಡೆದಿತ್ತೋ, ಅದೇನು ಮಸಲತ್ತು ಮಾಡಿದ್ದರೋ ಆಗ ನನಗೆ ಅರಿವಿರಲಿಲ್ಲ. ಒಟ್ಟಾರೆ ಹುಡುಕಿಕೊಂಡು ಬಂದ ಅಪ್ಪ, ನನಗೆ ಸಾಕಷ್ಟು ಬೆಣ್ಣೆ ಹೊಡೆದು, ಒಳ್ಳೆಯ ಸರ್ಕಾರಿ ಕೆಲಸ ಕೊಡಿಸುವುದಾಗಿ ನನ್ನ ಮನವೊಲಿಸಿ, ಇದ್ದ ಕೆಲಸ ಬಿಡಿಸಿ ಮತ್ತೆ ನನ್ನನ್ನು ತಿಪಟೂರಿಗೆ ಕರೆದುಕೊಂಡು ಹೊರಟರು. ಆದರೆ ಅಲ್ಲಿ ಹೋದ ನಂತರ ತಿಳಿಯಿತು ನನಗೆ, ಅವರೇಕೆ ಅಷ್ಟೊಂದು ಆಸಕ್ತಿ ತೆಗೆದುಕೊಂಡು ನನ್ನನ್ನು ಹುಡುಕಿಕೊಂಡು ಬಂದಿದ್ದು ಅಂತ!
ಅವರ ಪ್ಲಾನ್ ಈ ರೀತಿಯಿತ್ತು, ನಮ್ಮ ಗೌಡರ ಮನೆಗಳಲ್ಲಿ ಯಾರಾದರೂ ಒಬ್ಬ ಪದವೀಧರ ಹುಡುಗ ಸಿಗುತ್ತಾನೆಂದರೆ, ಅವನುದ್ದಕ್ಕೂ ಸುರಿದು, ಕನ್ಯಾದಾನ ಮಾಡಿ ಕೊಡಲು ಕನ್ಯಾ ಪಿತೃಗಳು ಸಿದ್ಧರಿರುತ್ತಿದ್ದರು. ಅಪ್ಪನ ತಂತ್ರದ ಪ್ರಕಾರ, ಸಕತ್ತಾಗಿ "ವರದಕ್ಷಿಣೆ" ತೆಗೆದುಕೊಂಡು, ಅದೇ ದುಡ್ಡನ್ನು ಯಾರಾದರೂ ಒಬ್ಬ ರಾಜಕಾರಣಿಯನ್ನು ಹಿಡಿದು, ಖರ್ಚು ಮಾಡಿ, ನನಗೊಂದು ಸರ್ಕಾರಿ ಕೆಲಸ ಕೊಡಿಸಿ, ಜೀವನದಲ್ಲಿ ನೆಲೆಯಾಗಿ ನಿಲ್ಲಿಸುವುದು! ಈ ತಂತ್ರವನ್ನು ಕಾರ್ಯರೂಪಕ್ಕಿಳಿಸಲು ಅಪ್ಪ, ನನ್ನ ಅಕ್ಕನನ್ನೇ ನನ್ನ ಮುಂದೆ ದಾಳವಾಗಿ ಆಟಕ್ಕಿಳಿಸಿಬಿಟ್ಟಿದ್ದರು.
ನನಗೆ ಇದು ಅರ್ಥವಾಗುವ ಹೊತ್ತಿಗೆ ನಾನು ಅಪ್ಪ, ಅಮ್ಮ, ಅಕ್ಕನ ಮಾತಿಗೆ ಮರುಳಾಗಿ ನಾಲ್ಕಾರು ಕಡೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಹೋಗಿ, ನೋಡಲು ಚೆನ್ನಾಗಿಯೂ ಇದ್ದು, ಸಾಕಷ್ಟು ವಿದ್ಯಾವಂತರಾಗಿಯೂ ಇದ್ದ ಹೆಣ್ಣು ಮಕ್ಕಳನ್ನು ನೋಡಿ ಬಂದು, ನಾನು ಓಕೆ ಅಂದಿದ್ದರು ಸಹಾ ಆ ಸಂಬಂಧಗಳು ಮುರಿದು ಹೋಗಿದ್ದವು. ನನಗಾಗ ಆಶ್ಚರ್ಯವಾಗಿತ್ತು, ಅದು ಹೇಗೆ ಅವರು ನನ್ನನ್ನು ನಿರಾಕರಿಸಿದರು ಅಂತ! ಆದರೆ ನಿಜವಾದ ವಿಷಯವೇನೆಂದರೆ, ನನಗೆ ಹೆಣ್ಣು ತೋರಿಸಿದ ಶಾಸ್ತ್ರ ಮಾಡಿದ ಅಪ್ಪ-ಅಮ್ಮ ತೆರೆಯ ಹಿಂದೆ ದೊಡ್ಡ ವ್ಯಾಪಾರವನ್ನೇ ಶುರು ಮಾಡಿ ಬಿಟ್ಟಿದ್ದರು! ತುರುವೇಕೆರೆಯಲ್ಲಿ ನಾನು ನೋಡಿ ಒಪ್ಪಿ ಬಂದಿದ್ದ ರಾಜೇಶ್ವರಿ ಎಂಬ ಹುಡುಗಿಯ ಅಣ್ಣ, ತಿಪಟೂರಿನ ಬಸ್ ನಿಲ್ದಾಣದಲ್ಲಿ ಸಿಕ್ಕಿ, ಅಪ್ಪ-ಅಮ್ಮ ಮಾಡಿದ ಚೌಕಾಸಿ ವ್ಯಾಪಾರದ ಬಗ್ಗೆ ಹೇಳುವವರೆಗೂ ನನಗೆ ಈ ಬಗ್ಗೆ ಗೊತ್ತೇ ಆಗಿರಲಿಲ್ಲ. ನನಗೇ ಗೊತ್ತಿಲ್ಲದಂತೆ ಮದುವೆಯ ಮಾರುಕಟ್ಟೆಯಲ್ಲಿ ನನ್ನನ್ನು ಮಾರಾಟಕ್ಕಿಟ್ಟ ಅಪ್ಪ-ಅಮ್ಮನ ಬಗ್ಗೆ ನನಗೆ ಎಲ್ಲಿಲ್ಲದ ಸಿಟ್ಟು, ತಿರಸ್ಕಾರಗಳು ಮೂಡಿ, ಅವರನ್ನು ಹಿಗ್ಗಾ ಮುಗ್ಗಾ "ಕ್ಲಾಸ್" ತೆಗೆದುಕೊಂಡು, ಇನ್ನೆಂದೂ ಅವರು ನನ್ನ ಮದುವೆಯ ಬಗ್ಗೆ ತಲೆ ಹಾಕಬಾರದೆಂದು ತಾಕೀತು ಮಾಡಿಬಿಟ್ಟೆ.
ಇದೇ ಸಿಟ್ಟಿನಲ್ಲಿ ಅಕ್ಕನ ಮನೆಗೆ ಹೋಗಿ, ಅವಳಿಗೂ ಸಾಕಷ್ಟು ಮಂಗಳಾರತಿ ಮಾಡಿದೆ. ಆಗ ಅವಳು ಹೇಳಿದ ಒಂದು ವಿಷಯ ನನ್ನ ಎದೆ ತಟ್ಟಿತು. ಅವಳೇನೂ ನನ್ನನ್ನು ವರದಕ್ಷಿಣೆಯೊಡನೆ ಮದುವೆಯಾಗಲಿ ಎಂದು ಬಯಸಿರಲಿಲ್ಲವಂತೆ, ಅಪ್ಪ-ಅಮ್ಮನೇ ಅವಳನ್ನು ಹೇಗಾದರೂ ನನ್ನನ್ನು ಒಪ್ಪಿಸುವಂತೆ ಕಾಡಿ ದುಂಬಾಲು ಬಿದ್ದಿದ್ದರಂತೆ. ಇದರಿಂದ ಅವರ ಸಾಲಗಳೂ ಸಾಕಷ್ಟು ತೀರುತ್ತವೆಂಬ ನಿರೀಕ್ಷೆಯಲ್ಲಿದ್ದರಂತೆ. ಇದನ್ನು ಕೇಳಿ ನನ್ನ ಕಿವಿಗೆ ಕಾದ ಸೀಸ ಹೊಯ್ದಂತಾಯಿತು.
ಸಿಟ್ಟಿನ ಭರದಲ್ಲಿ, ವಿದ್ಯಾವಂತೆಯಾದ ನೀನೂ ಸಹ ಹೀಗೆ ಮಾಡಬಹುದೇ ಎಂದು ಕೂಗಾಡಿದಾಗ ಅವಳದು ಒಂದೇ ಶಾಂತ ಉತ್ತರ. "ಇಲ್ಲಿ ನಿನಗಾಗಿ ಇನ್ನೊಂದು ಜೀವ ಕಾದು ಕುಳಿತಿದೆ, ನಿನ್ನ ಪ್ರೇಮ ವೈಫಲ್ಯ, ಅಪ್ಪ-ಅಮ್ಮನ ವರದಕ್ಷಿಣೆಯ ಆಸೆ ನೋಡಿ ನಾನು ಅಸಹಾಯಕಳಾಗಿ ನಿನಗೆ ಆ ಬಗ್ಗೆ ಏನೂ ಹೇಳಲಾಗಲಿಲ್ಲ, ಈಗ ಹೇಳುತ್ತೇನೆ, ಕೇಳು. ಸುಮಾರು ಮೂರು ವರ್ಷಗಳಿಂದ ಈ ಹುಡುಗಿ, ನಿನಗಾಗಿ ಕನಸು ಕಾಣುತ್ತಾ, ಮದುವೆಯಾದರೆ ಈ ಜನ್ಮದಲ್ಲಿ ಅದು ನಿನ್ನನ್ನು ಮಾತ್ರ ಅಂತ ತೀರ್ಮಾನ ತೊಗೊಂಡು, ಬಂದ ಸಂಬಂಧಗಳನ್ನೆಲ್ಲಾ ನಿರಾಕರಿಸಿ, ನಿನ್ನ ದಾರಿ ಕಾಯುತ್ತಿದ್ದಾಳೆ, ಅವಳ ಈ ಒಮ್ಮುಖ ಪ್ರೇಮ, ಅವರ ಮನೆಯ ನೆಮ್ಮದಿಯನ್ನೇ ಹಾಳು ಮಾಡಿದೆ " ಎಂದ ಅಕ್ಕನ ಮಾತುಗಳು ನನ್ನ ಸಿಟ್ಟನ್ನೆಲ್ಲಾ ಜರ್ರನೇ ಇಳಿಸಿ, ಒಂದು ಕ್ಷಣ ನನ್ನನ್ನು ಅಯೋಮಯನನ್ನಾಗಿ ಮಾಡಿ ಬಿಟ್ಟಿತ್ತು.
ಸಾವರಿಸಿಕೊಂಡ ನಾನು ಅಕ್ಕನಿಗೆ ಹೇಳಿದೆ, "ಸರಿ, ಆ ಹುಡುಗಿಯನ್ನು ಕರೆಸು, ನಾನು ಅವಳ ಜೊತೆ ಮಾತಾಡಬೇಕು". ಅಕ್ಕನ ಮಗಳು ಉಷಾ, ಓಡಿ ಹೋಗಿ, ಆ ಸುಂದರಿಯನ್ನು ಕರೆ ತಂದೇಬಿಟ್ಟಳು, ನೋಡಿದರೆ ಅವಳು ಬೇರಾರೂ ಅಲ್ಲ, ನಾನು ಆಗಾಗ್ಗೆ ಕುಳಿತು ಬಿಯರ್ ಕುಡಿಯುತ್ತಾ, ದಮ್ ಹೊಡೆಯಲು ಹೋಗುತ್ತಿದ್ದ ಅಂಗಡಿ ನಂಜೇಗೌಡನ ತಂಗಿ ಕಲಾವತಿ!!
ನಾನು ಸಾಕಷ್ಟು ಸಲ ಅಕ್ಕನ ಮನೆಗೆ ಹೋದಾಗ ಅವಳು, ತಾನು ಪ್ರತಿ ದಿನ ಶುಶ್ರೂಷೆ ಮಾಡುತ್ತಿರುವ, ಕ್ಯಾನ್ಸರ್ ಪೀಡಿತನಾಗಿ ಸಾವಿನ ದಡದಲ್ಲಿ ನಿಂತಿರುವ ಒಬ್ಬ ವಯಸ್ಕ ರೋಗಿಯ ಬಗ್ಗೆ ಹೇಳುತ್ತಿದ್ದಳು. ನಾನೂ ಸಹ ಒಂದೆರಡು ಬಾರಿ ಅವರ ಮನೆಗೆ ಭೇಟಿ ಕೊಟ್ಟು ಅವರ ಆಗಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡು, ಕಾಲೇಜಿನಲ್ಲಿ, ಮನಃಶಾಸ್ತ್ರದ ವಿದ್ಯಾರ್ಥಿಯಾಗಿ, ಸಾವಿನ ಬಗ್ಗೆ, ಸಾವಿನ ಹೆದರಿಕೆಯ ಬಗ್ಗೆ ಮಾನವರಲ್ಲಿ ಹುಟ್ಟುವ ಭಾವನೆಗಳ ಬಗ್ಗೆ ನಾನು ಸಿದ್ಧಪಡಿಸುತ್ತಿದ್ದ ಪ್ರಬಂಧಕ್ಕಾಗಿ ಅವರ ಬಗ್ಗೆ ಕೆಲವಾರು ಲೇಖನಗಳನ್ನೂ ಬರೆದಿದ್ದೆ. (ಮುಂದಿನ ಪುಟಕ್ಕೆ )