ನರೇಂದ್ರ ಮೋದಿಗೆ ಬಹುತೇಕ ಮೇ 21 ರಂದು ಪಟ್ಟಾಭೀಷೇಕ

ನವದೆಹಲಿ| Rajesh patil| Last Modified ಭಾನುವಾರ, 18 ಮೇ 2014 (14:34 IST)
ನರೇಂದ್ರ ಮೋದಿ ಅವರನ್ನು ತನ್ನ ನಾಯಕನೆಂದು ವಿಧ್ಯುಕ್ತವಾಗಿ ಆಯ್ಕೆ ಮಾಡುವ ಸಲುವಾಗಿ ಬಿಜೆಪಿ ಸಂಸದೀಯ ಪಕ್ಷ ಮೇ 20ರಂದು ಇಲ್ಲಿ ಸಭೆ ಸೇರಲಿದೆ.
ಪಕ್ಷದ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಂಸದೀಯ ಮಂಡಳಿಯ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಯಿತು. ನರೇಂದ್ರ ಮೋದಿ, ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ್‌ ಜೋಷಿ, ಸುಷ್ಮಾ ಸ್ವರಾಜ್‌ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಭವ್ಯ ಸ್ವಾಗತ: ಇದಕ್ಕೂ ಮುನ್ನ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿದ ಖುಷಿಯಲ್ಲಿ ಶನಿವಾರ ಬೆಳಿಗ್ಗೆ ದೆಹಲಿಗೆ ಬಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಪಕ್ಷದ ಸಹಸ್ರಾರು ಕಾರ್ಯಕರ್ತರು ಹಾಗೂ
ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು.
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಕ್ಷದ ಪ್ರಧಾನ ಕಚೇರಿಗೆ ಅದ್ದೂರಿಯ ಮೆರವಣಿಗೆಯಲ್ಲಿ ಬಂದ ಮೋದಿ ಅಲ್ಲಿ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.


‘ಈ ವಿಜಯದ ಶ್ರೇಯ ನನಗಲ್ಲ, ನಿಮಗೆ ಸಲ್ಲಬೇಕು. ಲಕ್ಷಾಂತರ ಕಾರ್ಯಕರ್ತರ ಕಠಿಣ ಪರಿಶ್ರಮದ ಫಲವಾಗಿ ಇಂಥದ್ದೊಂದು ಅಭೂತಪೂರ್ವ ಗೆಲುವು ನಮಗೆ ಒಲಿದು ಬಂದಿದೆ. 1952ರಿಂದ ಪಕ್ಷಕ್ಕಾಗಿ ದುಡಿದ ನಾಲ್ಕೈದು ತಲೆಮಾರಿನ ಎಲ್ಲ ಮುಖಂಡರಿಗೆ ಹಾಗೂ 125 ಕೋಟಿ ಭಾರತೀಯರಿಗೆ
ಈ ಕೀರ್ತಿ ಸಲ್ಲುತ್ತದೆ’ ಎಂದು ಭಾವುಕರಾಗಿ ನುಡಿದರು.
ಎನ್‌ಡಿಎ ಸಭೆ: 20ರಂದು ಸಂಸದೀಯ ಪಕ್ಷದ ಸಭೆ ನಂತರ ಎನ್‌ಡಿಎ ಮಿತ್ರ ಪಕ್ಷಗಳ ಸಭೆಯನ್ನೂ ಕರೆಯಲಾಗುವುದು. ಅಲ್ಲಿ ಮೋದಿ ಅವರನ್ನು ಮೈತ್ರಿಕೂಟದ ನಾಯಕನಾಗಿ ಆಯ್ಕೆ ಮಾಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :