ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಗದಿಪಡಿಸುವ ಸೀಮಿತ ಅಧಿಕಾರವನ್ನು ತೈಲ ಕಂಪನಿಗಳಿಗೇ ನೀಡುವ ಕುರಿತಾದ ನಿರ್ಧಾರವನ್ನು ಸರಕಾರ ತನ್ನ ಜುಲೈ ಆರರ ಬಜೆಟ್‌ನಲ್ಲಿ ತೆಗೆದುಕೊಳ್ಳಬಹುದು ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ತೈಲ ಸಂಸ್ಕರಣಾ ಘಟಕಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್‌ಗಳು ವಾಹನಗಳ ಚಿಲ್ಲರೆ ಇಂಧನ ದರವನ್ನು ಶೇಕಡಾ 15ರಿಂದ 20ರಷ್ಟು ಏರಿಕೆ ಮಾಡಲು ಸರಕಾರ ಅವಕಾಶ ಮಾಡಿಕೊಡಲಿದೆ ಎಂದು ಹೇಳಲಾಗಿದೆ. ಈ ಸಂಬಂಧ ಸರಕಾರದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರೂ ಮುನ್ಸೂಚನೆ ನೀಡಿದ್ದಾರೆ.
ದರ ಬದಲಾವಣೆಯು ಎರಡು ವಾರಗಳಲ್ಲಿ ಒಮ್ಮೆ ಮಾತ್ರ ಪುನರಾವರ್ತನೆಯಾಗುವಂತೆ ಸರಕಾರ ಸೀಮಿತಗೊಳಿಸಬಹುದು. ಹಾಗೊಂದು ವೇಳೆ ಈ ಅವಧಿಯಲ್ಲಿ ಜಾಗತಿಕ ಕಚ್ಚಾ ತೈಲಗಳ ಬೆಲೆ ಬ್ಯಾರೆಲ್‌ಗೆ 75 ಡಾಲರ್‌ಗಿಂತಲೂ ಹೆಚ್ಚು ಏರಿಕೆಯಾದರೆ ಗ್ರಾಹಕರ ರಕ್ಷಣೆಗೆ ಸರಕಾರ ಬರಬಹುದು ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಹಾಗೊಂದು ವೇಳೆ ಪ್ರಸ್ತಾವಿತ ತಿದ್ದುಪಡಿ ಅನುಮೋದನೆ ಪಡೆದುಕೊಂಡಲ್ಲಿ ಪೆಟ್ರೋಲ್ ದರವು ಪ್ರತೀ ಲೀಟರ್‌ಗೆ 5.1 ರೂಪಾಯಿಗಳಷ್ಟು ಹಾಗೂ ಡೀಸೆಲ್‌ಗೆ 2.6 ರೂಪಾಯಿಗಳಷ್ಟು ಏರಿಕೆಯಾಗಬಹುದು.
ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಮತ್ತು ಬಡವರು, ಮಧ್ಯಮ ವರ್ಗದವರಿಗೆ ಸಹಾಯವಾಗುವಂತೆ ರಾಜ್ಯಗಳು ಪಡೆದುಕೊಳ್ಳುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸೀಮೆಎಣ್ಣೆ ದರಗಳನ್ನು ಸರಕಾರವೇ ನಿರ್ಧರಿಸುತ್ತದೆ. ಈ ಸಂಬಂಧ ಉಂಟಾಗುವ ನಷ್ಟವನ್ನು ಕೂಡ ಸರಕಾರವೇ ತುಂಬಿಸುತ್ತದೆ.
|