ವಿತ್ತ ಸಚಿವ ಪ್ರಣಬ್ ಮುಖರ್ಜಿ ಮುಂದಿನ ಸೋಮವಾರ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಭಾರೀ ಪ್ರಮಾಣದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಮತ್ತು ವೈಯಕ್ತಿಕ ತೆರಿಗೆ ವಿನಾಯ್ತಿ ಪ್ರಕಟಿಸುವ ಸಾಧ್ಯತೆಗಳಿವೆ.
ಕಾರ್ಪೊರೇಟ್ ಸಂಸ್ಥೆಗಳಿಗೆ ವಿಧಿಸಲಾಗುವ ತೆರಿಗೆಯನ್ನು ಶೇಕಡಾ 30ರಿಂದ 25ಕ್ಕಿಳಿಸುವುದು ಮತ್ತು ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 1.5 ಲಕ್ಷದಿಂದ 2.5 ಲಕ್ಷ ರೂಪಾಯಿಗಳಿಗೇರಿಸುವುದು ಅಥವಾ ಅದಕ್ಕೂ ಹೆಚ್ಚಿನ ಕೊಡುಗೆಗಳನ್ನು ಪ್ರಕಟಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ವರ್ಷಗಳಿಂದ ತೆರಿಗೆ ಸಂಗ್ರಹದಲ್ಲಿ ವೃದ್ಧಿ ಕಂಡು ಬಂದಿರುವುದರಿಂದ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳಲ್ಲಿ ಸಂತುಲನೆ ಕಾಯ್ದುಕೊಳ್ಳುವುದು ಸಾಧ್ಯವಾಗಿತ್ತು. ತೆರಿಗೆ ವಿನಾಯಿತಿ ಮಿತಿ ಹೆಚ್ಚಳದಿಂದಾಗುವ ಆದಾಯ ನಷ್ಟವನ್ನು ಸುಧಾರಿತ ತೆರಿಗೆ ನೀತಿಯಿಂದ ತುಂಬಿಕೊಳ್ಳಬಹುದು ಎಂಬುದು ಸರಕಾರದ ಲೆಕ್ಕಾಚಾರ.
ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವ ವಿಚಾರವನ್ನೂ ಪರಿಗಣಿಸಲಾಗುತ್ತದೆ, ಆದರೆ ಕಾರ್ಪೊರೇಟ್ ತೆರಿಗೆಯ ಸರ್ಚಾರ್ಜ್ ರದ್ದು ಮಾಡುವ ಸಾಧ್ಯತೆಗಳು ಕಡಿಮೆ ಎಂದೂ ಹೇಳಲಾಗಿದೆ.
ಉತ್ಪಾದನಾ ವಲಯವನ್ನು ಪ್ರೋತ್ಸಾಹಿಸುವ ಗುರಿಯುಳ್ಳ ಹೂಡಿಕೆ ಭತ್ಯೆ ಪುನರೂರ್ಜಿತಗೊಳಿಸುವ ಪ್ರಸ್ತಾವನೆಯನ್ನೂ ಪರಿಗಣಿಸಲಾಗುತ್ತದೆ. ಅದರ ಪ್ರಕಾರ ಕಂಪನಿಯೊಂದು ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ಸಾಮರ್ಥ್ಯ ವಿಸ್ತರಿಸಲು ಹೆಚ್ಚುವರಿ ಹಣವನ್ನು ಹೂಡಲು ನಿರ್ಧರಿಸಿದಲ್ಲಿ, ಆ ಮೊತ್ತವನ್ನು ಕಂಪನಿ ಪಾವತಿಸಬೇಕಾದ ಆದಾಯ ತೆರಿಗೆಯ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ.
ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವುದೋ ಅಥವಾ ಹೂಡಿಕೆ ಭತ್ಯೆಗೆ ಪುನಶ್ಚೇತನ ನೀಡುವುದೋ ಎಂಬ ವಿಚಾರದಲ್ಲೀಗ ಸರಕಾರವು ಗೊಂದಲದಲ್ಲಿದೆ. ಇದರ ಬಗ್ಗೆ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಷ್ಟೆ.
ಮೂಲಗಳ ಪ್ರಕಾರ, ಈ ಎಲ್ಲಾ ಪ್ರಸ್ತಾವನೆಗಳ ಬಗ್ಗೆ ಸರಕಾರದ ಉನ್ನತ ಮಟ್ಟದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.ಕಾರ್ಪೊರೇಟ್ ತೆರಿಗೆ ಕಡಿತದ ಜತೆಗೆ ಮೇಲ್ತೆರಿಗೆಯನ್ನು ಉಳಿಸಿಕೊಳ್ಳುವುದು ಸರಕಾರದ ಮುಂದಿರುವ ಪರ್ಯಾಯಗಳು ಎಂದು ಹೇಳಲಾಗುತ್ತಿದೆ.
|