ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ಹಣದುಬ್ಬರ ದರ ಒಂದು ಹಂತದಲ್ಲಿ ಶೇ.8ರನ್ನು ದಾಟಿತ್ತು, ಹೀಗಿರುವಾಗ ಹಣದುಬ್ಬರದ ಕುರಿತು ಮಾತನಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ ಎಂದು ವಿತ್ತ ಸಚಿವ ಪಿ. ಚಿದಂಬರಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಸ್ಟೀಲ್, ಸಿಮೆಂಟ್‌ಗಳ ಬೆಲೆ ಇಳಿಸಲು ಉದ್ಯಮ ವಲಯಕ್ಕೆ ಮಾರ್ಗದರ್ಶಿಕೆ ನೀಡಲಾಗಿದೆ. ಅಲ್ಲದೆ, ಈ ಉತ್ಪನ್ನಗಳ ರಫ್ತು ನಿಷೇಧಿಸಲಾಗಿದೆ. ಈ ಮೂಲಕ ಹಣದುಬ್ಬರ ಮತ್ತು ಬೆಲೆ ಏರಿಕೆಯ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದ್ದಾರೆ.
ಹಣದುಬ್ಬರದಿಂದಾಗಿರುವ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಸರ್ವ ಪ್ರಯತ್ನ ನಡೆಸುತ್ತಿದ್ದು, ಶೀಘ್ರದಲ್ಲಿ ನಿಯಂತ್ರಣಕ್ಕೆ ಬರಲಿದೆ ಎಂದು ಅವರು ನುಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಈ ಅಧಿಕಾರವಧಿಯಲ್ಲಿ ರೈತರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ 40 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಅತ್ಯಂತ ಮಹತ್ವದ ಚುನಾವಣೆ ನಡೆಯುತ್ತಿದೆ. ಇದು ಮುಂದಿನ ಲೋಕಸಭೆಗೆ ದಿಕ್ಸೂಚಿಯಾಗಲಿದೆ. ಆಡಳಿತಾತ್ಮಕ ಮತ್ತು ವಿತ್ತೀಯ ಭದ್ರತೆಗಾಗಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಆರಿಸಬೇಕೆಂದು ಚಿದಂಬರಂ ಮತದಾರರಲ್ಲಿ ಮನವಿ ಮಾಡಿದ್ದಾರೆ.
|