ಮಾರುಕಟ್ಟೆಯಲ್ಲಿ ಉಕ್ಕು ದರ ಹೆಚ್ಚಿರುವುದರ ಪರಿಣಾಮವಾಗಿ, ಮುಂದಿನ ದಿನಗಳಲ್ಲಿ, ರೈಲ್ವೇ ಮೂಲಭೂತ ಸೌಕರ್ಯಗಳ ಯೋಜನೆಗಳಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗದಂತೆ ತಡೆಯಲು ರೈಲ್ವೆ ಗುತ್ತಿಗೆ ನಿಯಮವನ್ನು ಪರಿಷ್ಕರಿಸಲಾಗಿದೆ. ದೇಶಾದ್ಯಂತ ನಡೆಯುತ್ತಿರುವ ರೈಲ್ವೆ ಯೋಜನೆಗಳಿಗೆ ಉಕ್ಕಿನ ಬೆಲೆ ಹೆಚ್ಚಳವು ತೀವ್ರ ಪರಿಣಾಮ ಬೀರಿದೆ.
ಈ ಬಗ್ಗೆ ಮಾತನಾಡಿದ ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ,"ನಾವು ಬೆಲೆ ಏರಿಳಿತ ವಿಭಾಗವನ್ನು ಪರಿಷ್ಕರಿಸಿದ್ದೇವೆ. ಬೆಲೆಯಲ್ಲಿ ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ, ಈಗ ಸಾಗುತ್ತಿರುವ ಕೆಲಸಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದೆಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದೇವೆ" ಎಂದು ತಿಳಿಸಿದ್ದಾರೆ.
"ಪ್ರತಿ ಗುತ್ತಿಗೆಯೂ ಬೆಲೆ ಏರಿಳಿತ ನಿಬಂಧನೆ ಹೊಂದಿದ್ದರೂ ಸಹ, ಅದು ಮಾರುಕಟ್ಟೆಯ ಬೆಲೆಯ ಶೇ.10ರಿಂದ 15ರಷ್ಟನ್ನು ಮಾತ್ರ ಪರಿಹರಿಸಬಲ್ಲದು. ಉಕ್ಕುದರದಲ್ಲಿ ಶೇ.45ರಷ್ಟು ಹೆಚ್ಚಳ ಉಂಟಾಗಿದೆ. ಇದು ಗುತ್ತಿಗೆದಾರರಿಗೆ ಸಂಪೂರ್ಣ ಪರಿಹಾರ ನೀಡದು" ಎಂದು ಅವರು ನುಡಿದರು.
|