ಸಗಟು ಮತ್ತು ಗ್ರಾಹಕ ದರ ಸೂಚ್ಯಂಕ ಸಂಬಂಧಿತ ಹಣದುಬ್ಬರದ ದರವು ಏರಿಕೆಯಾಗುತ್ತಲೇ ಹೋಗುತ್ತಿದ್ದರೂ, ಡಾಲರ್ ವಿರುದ್ಧ ರೂಪಾಯಿ ದರ ಕುಸಿತವನ್ನು ಆರ್‌ಬಿಐ ತಡೆಯುತ್ತಿಲ್ಲ ಎಂದು ಪ್ರಮುಖ ಬ್ಯಾಂಕಿಂಗ್ ಸಂಸ್ಥೆ ಎಚ್ಎಸ್‌ಬಿಸಿ ದೂರಿದೆ.
ಈ ಹಣಕಾಸು ವರ್ಷದಲ್ಲಿ ಅಮೆರಿಕ ಡಾಲರ್ ಎದುರು 43ರ ಗಡಿಗೆ ತಲುಪುತ್ತಿರುವ ರೂಪಾಯಿ ಶೇ.6ರ ಕುಸಿತ ಕಂಡಿದ್ದು, ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮಗಳು ಪರಿಣಾಮಕಾರಿಯಾಗುತ್ತಿಲ್ಲ ಎಂದು ಮುಖ್ಯ ವಿತ್ತೀಯ ವಿಶ್ಲೇಷಕ ರಾಬರ್ಟ್ ಪ್ರಿಯರ್ ವಾಂಡೆಸ್‌ಫೋರ್ಡ್ ಹೇಳಿದ್ದಾರೆ. 2006ರ ಆಗಸ್ಟ್ ತಿಂಗಳಿಂದೀಚೆಗೆ ರೂಪಾಯಿ ಡಾಲರ್ ಎದುರು ಮೌಲ್ಯ ವರ್ಧಿಸಿಕೊಳ್ಳುತ್ತಿತ್ತು, ಆದರೆ, ಈ ವರ್ಷದ ಫೆಬ್ರವರಿ ತಿಂಗಳಾರಂಭದಲ್ಲಿದ್ದ 39.4 ಮೌಲ್ಯಕ್ಕಿಂತ ಈಗ ಶೇ.7ಕ್ಕೂ ಹೆಚ್ಚು ಕುಸಿತ ಕಂಡಿದೆ. ಅಂದರೆ ಈ ಹಣಕಾಸು ವರ್ಷದ ಆರಂಭದಲ್ಲಿ ಡಾಲರೊಂದಕ್ಕೆ 40 ರೂಪಾಯಿ ಇದ್ದ ಮೌಲ್ಯವು, ಇದೀಗ ಶೇ.6ರಷ್ಟು ಕುಸಿತ ಕಂಡು 42.5ಕ್ಕೆ ತಲುಪಿದೆ ಎಂದು ಅವರು ತಮ್ಮ ಭಾರತೀಯ ಆರ್ಥಿಕತೆ ಕುರಿತ ಸಂಶೋಧನಾ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ರೂಪಾಯಿ ದರ ಕುಸಿತದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಬದಲು ಕೇಂದ್ರ ಸರಕಾರ ಮತ್ತು ಆರ್‌ಬಿಐ, ರಫ್ತು ಪುನಶ್ಚೇತನಗೊಳಿಸಿ, ಆರ್ಥಿಕತೆಯನ್ನು ಬೆಂಬಲಿಸುವುದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸಿದ್ದಾರೆ
|