ಸರಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಕೃಷಿ ಸಂಬಂಧಿತ ಟ್ರಾಕ್ಟರ್ ಹಾಗೂ ಇನ್ನಿತರ ಯಂತ್ರೋಪಕರಣಗಳ ಖರೀದಿಗೆ ನೀಡಲಾಗುವ ಸಾಲವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಈ ನಿರ್ಧಾರವನ್ನು ತಕ್ಷಣದಿಂದ ಜಾರಿಗೆ ತರುವಂತೆ ಎಸ್‌ಬಿಐ ಈ ಸಂಬಂಧ ತನ್ನೆಲ್ಲ ಶಾಖೆಗಳಿಗೆ ಸುತ್ತೋಲೆ ರವಾನಿಸಿದೆ. ಸಾಲ ನೀಡಿಕೆಗೆ ಆದ್ಯತಾ ವಲಯವೆಂದು ಸರಕಾರ ಗುರುತಿಸಿರುವ ಕೃಷಿರಂಗದ ಚಟುವಟಿಕೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಹೊಸ ಟ್ರಾಕ್ಟರ್, ಪವರ್ ಟಿಲ್ಲರ್, ಮತ್ತಿತರ ಯಂತ್ರೋಪಕರಣಗಳ ಖರೀದಿಗೆ ನೀಡಿದ್ದ ಸಾಲದ ದೊಡ್ಡಮೊತ್ತವು ಮರುಪಾವತಿ ಆಗದಿರುವುದು ಈ ನಿರ್ಧಾರಕ್ಕೆ ಕಾರಣ ಎಂದು ಬ್ಯಾಂಕ್ ತಿಳಿಸಿದೆ.
ಕೇಂದ್ರವು ತನ್ನ ಬಜೆಟ್‌ನಲ್ಲಿ 60,000 ಕೋಟಿ ರೂಪಾಯಿ ಸಾಲಮನ್ನಾ ಪ್ರಕಟಿಸಿರುವ ಒಂದು ತಿಂಗಳಲ್ಲೇ ಪ್ರಮುಖ ಬ್ಯಾಂಕಿನ ಈ ನಿರ್ಧಾರ ಹೊರಬಿದ್ದಿದೆ.
|