ವಿಶ್ವದಲ್ಲಿ ಅತಿಹೆಚ್ಚು ಅಕ್ಕಿ ಖರೀದಿ ಮಾಡುವ ರಾಷ್ಟ್ರಗಳಲ್ಲಿ ಒಂದಾಗಿರುವ ಸೌದಿ ಅರೇಬಿಯವು ಅಕ್ಕಿಕೊರತೆಯನ್ನು ಎದುರಿಸುತ್ತಿದ್ದು, ಅಕ್ಕಿ ರಫ್ತು ಮೇಲೆ ಹೇರಿರುವ ನಿರ್ಬಂಧವನ್ನು ತೊಡೆದು ಹಾಕುವುದು ಸೇರಿದಂತೆ, ಕ್ರಮಗಳ ಕುರಿತು ಚರ್ಚಿಸಲು ಭಾರತವನ್ನು ಸಂಪರ್ಕಿಸಿದೆ.
ಅಕ್ಕಿ ಆಮದಿಗೆ ಸಂಬಂಧಿಸಿದಂತೆ, ಸೌದಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಮಂಡಳಿಯು ಭಾರತೀಯ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ ಎಂದು ರಿಯಾದ್‌ನಲ್ಲಿ ಭಾರತೀಯ ದೂತಾವಾಸದ ಮುಖ್ಯಸ್ಥ ರಾಜೀವ್ ಸಹಾರೆ ಹೇಳಿದ್ದಾರೆ.
ಅಕ್ಕಿ ರಫ್ತು ವಿಚಾರಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಸೌದಿಗೆ ಭೇಟಿ ನೀಡಿದ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯರೊಂದಿಗೆ ಈ ವಿಚಾರವನ್ನು ವಿಷದವಾಗಿ ಚರ್ಚಿಸಲಾಗಿದೆ ಎಂದು ಹೇಳಿದ ರಾಜೀವ್, ಅದಾಗ್ಯೂ, ಉನ್ನತ ಗುಣಮಟ್ಟದ ಬಾಸುಮತಿ ಅಕ್ಕಿ ರಫ್ತಿಗೆ ನಿಷೇಧವಿಲ್ಲ ಎಂದು ನುಡಿದರು.
ಅಕ್ಕಿ ರಫ್ತಿನಲ್ಲಿ ವಿಶ್ವದಲ್ಲೇ ದ್ವಿತೀಯ ಸ್ಥಾನ ಪಡೆದಿರುವ ಮತ್ತು ಕೊಲ್ಲಿ ರಾಷ್ಟ್ರಗಳಿಗೆ ಪ್ರಮುಖ ಪೂರೈಕೆದಾರನಾಗಿರುವ ಭಾರತವು ಮಾರ್ಚ್ ತಿಂಗಳಲ್ಲಿ ಎಲ್ಲಾ ಬಾಸುಮತಿಯೇತರ ಅಕ್ಕಿ ರಫ್ತಿಗೆ ನಿಷೇಧ ಹೇರಿದೆ.
|