ಹೊಸ ಶೈಕ್ಷಣಿಕ ವರ್ಷಾರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ, ತೆರಿಗೆ ಲಾಭ ಪಡೆಯುತ್ತಿದ್ದ ಶೈಕ್ಷಣಿಕ ಸಂಸ್ಥೆಗಳು ಕೂಡ ತೆರಿಗೆ ವ್ಯಾಪ್ತಿಗೆ ಬರುವ ಸಾಧ್ಯತೆಗಳು ಗೋಚರಿಸುತ್ತಿವೆ. ಅವುಗಳು ಭಾರಿ ಪ್ರಮಾಣದಲ್ಲಿ ಅಕ್ರಮಗಳಲ್ಲಿ ತೊಡಗಿರುವುದರಿಂದ ದೇಶದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಆದಾಯ ತೆರಿಗೆ ಇಲಾಖಾ ಮೂಲಗಳ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ಇತರ ವಲಯಗಳ ಜತೆಗೆ ಶೈಕ್ಷಣಿಕ ಸಂಸ್ಥೆಗಳು ಕೂಡ ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ತೆರಿಗೆ ತಪ್ಪಿಸಿಕೊಂಡಿವೆ ಎಂಬುದನ್ನು ಇಲಾಖಾ ವರದಿಯೊಂದು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಕಳೆದ ಹಣಕಾಸು ವರ್ಷದಲ್ಲಿ ಶೈಕ್ಷಣಿಕ ವಲಯವೂ ಸೇರಿದಂತೆ ವಿಭಿನ್ನ ಕ್ಷೇತ್ರಗಳು ಸುಮಾರು 3,400 ಕೋಟಿ ರೂ. ತೆರಿಗೆ ತಪ್ಪಿಸಿಕೊಂಡಿರುವುದನ್ನು ಇಲಾಖೆಯು ಪತ್ತೆ ಹಚ್ಚಿತ್ತು.
ಆದಾಯ ತೆರಿಗೆ ಕಾಯಿದೆಯ ಪ್ರಕಾರ, ಶೈಕ್ಷಣಿಕ ಸೊಸೈಟಿಗಳು ಬೇರಾವುದೇ ಲಾಭಕ್ಕೆ ಮೀಸಲಾಗದೆ, ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಪಡೆದ ಆದಾಯವನ್ನು ತೆರಿಗೆ ವ್ಯಾಪ್ತಿಗೆ ಸೇರಿಸಲಾಗುವುದಿಲ್ಲ.
ಕಾಯಿದೆಯ ಪ್ರಕಾರ ತೆರಿಗೆ ರಿಯಾಯಿತಿ ಪಡೆಯುತ್ತಿರುವ ಶೈಕ್ಷಣಿಕ ಟ್ರಸ್ಟ್‌ಗಳು ಮತ್ತು ಸಂಸ್ಥೆಗಳಲ್ಲಿ ಕೆಲವು, ಶಿಕ್ಷಣ ಎಂಬುದನ್ನು ಚಾರಿಟಿ ಕಾರ್ಯ ಎಂದೇ ಪರಿಗಣಿಸಿ, ಹಣವನ್ನು ಬೇರೆಡೆಗೆ ಹರಿಸುತ್ತವೆ, ಈ ಮೂಲಕ ದೇಶದ ಬೊಕ್ಕಸಕ್ಕೆ ಕಾನೂನುಬದ್ಧ ತೆರಿಗೆ ನೀಡದೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಹೆಚ್ಚಾಗಿ ಲೆಕ್ಕಪತ್ರ ಸಿಗದ ಡೊನೇಶನ್ ಹಣದ ಹೊರತಾಗಿ, ಕೆಲವು ಶಿಕ್ಷಣ ಸಂಸ್ಥೆಗಳು ಕ್ಯಾಪಿಟೇಶನ್ ಶುಲ್ಕ, ಸಂಸ್ಥೆಯ ಅಭಿವೃದ್ಧಿ ಮತ್ತಿತರ ಶುಲ್ಕಗಳನ್ನು ವಿದ್ಯಾರ್ಥಿಗಳ ಪೋಷಕರಿಂದ ಪಡೆಯುತ್ತವೆ. ಇವುಗಳಿಂದ ಬರುವ ಎಲ್ಲ ಆದಾಯವನ್ನು ಶೈಕ್ಷಣಿಕ ಕಾರ್ಯಕ್ಕಾಗಿ ಮಾತ್ರವೇ ಬಳಸಲಾಗುತ್ತಿಲ್ಲ. ಹಣವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
|