ಹೊಸ ಟ್ರಾಕ್ಟರ್ ಸಾಲ ಸ್ಥಗಿತಗೊಳಿಸಿ ಮೇ 16ರಂದು ಹೊರಡಿಸಲಾಗಿದ್ದ ಸುತ್ತೋಲೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ತಕ್ಷಣದಿಂದ ಜಾರಿಗೆ ಬರುವಂತೆ ಬುಧವಾರ ಹಿಂಪಡೆದುಕೊಂಡಿದೆ.
"ದಿನಾಂಕ ಮೇ 16, 2008ರ ಸುತ್ತೋಲೆಯ ಕುರಿತು ನಾವು ವಿಷಾದಿಸುತ್ತೇವೆ. ಟ್ರಾಕ್ಟರ್ ಸಾಲಗಳಿಗೆ ಸಂಬಂಧಿಸಿದಂತೆ ತಪ್ಪುತಿಳುವಳಿಕೆಯುಂಟಾಗಿದ್ದು, ತತ್ಪರಿಣಾಮ ಕಳವಳಗಳು ವ್ಯಕ್ತವಾಗಿವೆ. ಈ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆದುಕೊಳ್ಳಲಾಗಿದೆ" ಎಂದು ಎಸ್‌ಬಿಐ ಅಧ್ಯಕ್ಷರು ಹೇಳಿದ್ದಾರೆ.
ಟ್ರಾಕ್ಟರ್ ಹಾಗೂ ಇತರ ಯಂತ್ರಗಳಿಗಾಗಿ ಹೊಸದಾಗಿ ಸಾಲನೀಡಿಕೆಯನ್ನು ಸ್ಥಗಿತಗೊಳಿಸುವಂತೆ ಎಸ್‌ಬಿಐ ಮೇ 16ರಂದು ತನ್ನ ಎಲ್ಲಾ ಶಾಖೆಗಳಿಗೆ ಸುತ್ತೋಲೆ ಹೊರಡಿಸಿತ್ತು. ಇದರಿಂದ ಯುಪಿಎಯ ಸರಕಾರದ 60 ಸಾವಿರ ಕೋಟಿ ರೂಪಾಯಿ ಕೃಷಿಕರ ಸಾಲಮನ್ನಾದ ಹೊರೆಹೊರಬೇಕಿರುವ ಇತರ ರಾಷ್ಟ್ರೀಕೃತ ಬ್ಯಾಂಕುಗಳೂ ಇದೇ ಹಾದಿತುಳಿಯಲಿವೆ ಎಂಬ ಭೀತಿಯುಂಟಾಗಿತ್ತು.
|