ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರ ಅನುಭೋಗ ಪದ್ಧತಿಯಲ್ಲಿನ ಬದಲಾವಣೆಯು ಆಹಾರ ಮತ್ತು ಇಂಧನ ಬೆಲೆಏರಿಕೆಗೆ ಕಾರಣ ಎಂಬ ವಾದವನ್ನು ತಳ್ಳಿಹಾಕಿರುವ ಭಾರತ, ವಿಶ್ವಬ್ಯಾಂಕು ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನೀತಿಗಳೇ ಇದಕ್ಕೆ ಕಾರಣ ಎಂಬ ತಿರುಗೇಟು ನೀಡಿದೆ. ಅಲ್ಲದೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ 'ಅತಿಹೆಚ್ಚು ಮತ್ತು ಸುಸ್ಥಿರವಲ್ಲದ' ಬೇಡಿಕೆ ಇದಕ್ಕೆ ಕಾರಣ ಎಂದು ಹೇಳಿದೆ.
ಈ ಅನುಭೋಗ ಪದ್ಧತಿಯು ದಶಕಕ್ಕಿಂತಲೂ ಅಧಿಕ ಸಮಯದಿಂದ ಅಸ್ತಿತ್ವದಲ್ಲಿದೆ ಎಂದು ವಿಶ್ವಸಂಸ್ಥೆಯ ರಾಯಭಾರಿ ನಿರುಪಮ ಸೇನ್ ಹೇಳಿದ್ದಾರೆ. ತೈಲ ಬೆಲೆಯ ಬೇಡಿಕೆಯಲ್ಲಿ ಒಂದು ಶೇಕಡಾ ಹೆಚ್ಚಳವಾಗಿದ್ದರೆ, ಡಾಲರ್‌ಗಳಲ್ಲಿ ಬೆಲೆಯು ಶೇ.90ರಷ್ಟು ಹೆಚ್ಚಳವಾಗಿದೆ ಎಂದು ಸೇನ್ ಅಂಕಿಅಂಶಗಳನ್ನು ನೀಡಿದ್ದಾರೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಆರ್ಥಿಕ ಬಿಕ್ಕಟ್ಟುಗಳು ಡಾಲರ್ ಬೆಲೆಯನ್ನು ದುರ್ಬಲಗೊಳಿಸುತ್ತಿದೆ. ಜೈವಿಕ ಇಂಧನ ಉತ್ಪತ್ತಿಗಾಗಿ ಧಾನ್ಯಗಳ ಬದಲಾವಣೆಯೂ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ನುಡಿದರು.
|