ಹಣದುಬ್ಪರದ ನಿಯಂತ್ರಣಕ್ಕೆ ಸರಕಾರವು ಯುದ್ಧೋಪಾದಿಯಲ್ಲಿ ಕೈಗೊಂಡಿರುವ ಕ್ರಮಗಳು ಪರಿಣಾಮ ಬೀರಿದ್ದು, ಹಣದುಬ್ಬರದ ಏರಿಕೆಗೆ ತಡೆಯುಂಟಾಗಿದೆ. ಶೇ0.01ರಷ್ಟು ಇಳಿದಿರುವ ಹಣದುಬ್ಬರ, ಮೇ 10ರಂದು ಕೊನೆಗೊಂಡಿರುವ ವಾರದಲ್ಲಿ ಶೇ.7.82ರಷ್ಟು ದಾಖಲಾಗಿದೆ.
ಶುಕ್ರವಾರ ಬಿಡುಗಡೆಯಾಗಿರುವ ಅಧಿಕೃತ ಅಂಕೆಸಂಖ್ಯೆಗಳ ಪ್ರಕಾರ ಹಣದುಬ್ಬರದ ಪ್ರಮಾಣವು ಶೇ.7.82 ದಾಖಲಾಗಿದೆ. ಮೇ 10ಕ್ಕೂ ಹಿಂದಿನ ವಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಹಣದುಬ್ಬರ 7.83 ಆಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಹಣದುಬ್ಬರದ ಪ್ರಮಾಣ ಶೇ.5.62 ಆಗಿತ್ತು.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆಏರಿಕೆಯ ಊಹೆಯ ಹಿನ್ನೆಲೆಯಲ್ಲಿ ಹಣದುಬ್ಬರ ಮುಂದಿನ ಮೂರ್ನಾಲ್ಕು ತಿಂಗಳಲ್ಲೂ ಇದೇ ಪ್ರಮಾಣದಲ್ಲಿ ಮುಂದುವರಿಯಲಿದೆ. ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚುವರಿ ಹಣಕಾಸು ಮತ್ತು ಆರ್ಥಿಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇತ್ತೀಚಿನ ತಿಂಗಳಲ್ಲಿ ಹಣದುಬ್ಬರದಲ್ಲಿ ನಾಗಾಲೋಟದ ಏರಿಕೆ ಕಂಡಿದ್ದು ಸರಕಾರವು ಮಿತ್ರಪಕ್ಷಗಳಿಂದ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ಎದುರಿಸುತ್ತಿದೆ.
|