ವಿಪ್ರೊ ಟೆಕ್ನಾಲಜಿಯು ದೇಶದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಕೋಡಿಂಗ್ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಅದಕ್ಕಾಗಿ ಕೋಡ್‌ಝಾಪ್‌ಗುರು ಡಾಟ್ ಕಾಂ ಎಂಬ ಅಂತರ್ಜಾಲ ತಾಣವನ್ನು ಪ್ರಾರಂಭಿಸಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೋಡಿಂಗ್ ಕ್ಷೇತ್ರದಲ್ಲಿನ ತಮ್ಮ ಚಾಕಚಕ್ಯತೆಯನ್ನು ಮನದಟ್ಟು ಮಾಡಲು ಈ ಸ್ಪರ್ಧೆಯು ಅವಕಾಶ ಕಲ್ಪಿಸುವುದಲ್ಲದೆ ಹೆಚ್ಚಿನ ಅಂಕದೊಡನೆ ವಿಜೇತರಾದವರಿಗೆ ಲ್ಯಾಪ್‌ಟಾಪ್, ಐಪಾಡ್ಸ್, ಎಲ್‌ಸಿಡಿ ಟಿವಿ ಮುಂತಾದ ಆಧುನಿಕ ತಂತ್ರಜ್ಞಾನ ವಸ್ತುಗಳನ್ನು ಬಹುಮಾನವಾಗಿ ನೀಡಲಾಗುವುದು.
ಮೊದಲ ಹಂತದ ಪರೀಕ್ಷೆಯು ಅಂತರ್ಜಾಲ ಮುಖಾಂತರ ದೇಶದ ಪ್ರಮುಖ 7 ನಗರಗಳಲ್ಲಿ ನಡೆಯಲಿದೆ. ಮೊದಲ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಕೊನೆಯ ಹಂತದ ಸ್ಪರ್ಧೆಯನ್ನು ಬೆಂಗಳೂರಿನಲ್ಲಿರುವ ವಿಪ್ರೋ ಕ್ಯಾಂಪಸ್‌ನಲ್ಲಿ ಎದುರಿಸಬೇಕಾಗುತ್ತದೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ವಿವರ ನೀಡಿರುವ ವಿಪ್ರೋ ಟೆಕ್ನಾಲಜಿಯ ಪ್ರತಿಭಾರಂಗದ ಮುಖ್ಯಸ್ಥೆ ಪ್ರೀತಿ ರಾಜೋರಾ, ವಿಪ್ರೊ ಟೆಕ್ನಾಲಜಿಯ ಈ ಪ್ರಯತ್ನವು ವಿದ್ಯಾರ್ಥಿಗಳಲ್ಲಿ ಕುತೂಹಲ ಉಂಟುಮಾಡಲಿದ್ದು, ಉದ್ಯೋಗದ ಸ್ಥಳದಲ್ಲಿನ ನಿಜ ಕಾರ್ಯಚಟುವಟಿಕೆ ಕುರಿತಾಗಿ ಅಭ್ಯರ್ಥಿಗಳಿಗೆ ಅರಿವು ಒದಗಿಸಲಿದೆ. ಸಮಸ್ಯೆಗಳಿಗೆ ಕೋಡಿಂಗ್ ಬಳಸುವಿಕೆ ಮತ್ತು ಅದು ತಮ್ಮಿಂದ ಸಾಧ್ಯವೇ ಎಂಬುವುದನ್ನು ಈ ಮೂಲಕ ತಿಳಿಯಬಹುದಾಗಿದೆ. ವಿಜೇತರಿಗೆ ಬಹುಮಾನ ಮಾತ್ರವಲ್ಲದೇ ವಿಪ್ರೊ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶವೂ ದೊರೆಯಲಿದೆ ಎಂದರು.
ಆಸಕ್ತರು ಮೇ 31ರೊಳಗೆ ಕೋಡ್‌ಝಾಪ್‌ಗುರು ಅಂತರ್ಜಾಲ ತಾಣದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
|