ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲಮನ್ನಾ ಪ್ರಮಾಣವನ್ನು ಶುಕ್ರವಾರ ಕೇಂದ್ರ ಸರಕಾರ ಶೇ20 ರಷ್ಟು ಏರಿಸಿದೆ. 60,000 ಕೋಟಿ ಇದ್ದ ಸಾಲಮನ್ನಾ ಮೊತ್ತವನ್ನು 71,680 ಕೋಟಿಗೇರಿಸಲಾಗಿದ್ದು, ಇನ್ನಷ್ಟು ಮಂದಿ ರೈತರು ಈ ಯೋಜನೆಯ ವ್ಯಾಪ್ತಿಯಡಿ ಬರಲಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಾಲಮನ್ನಾ ಮೊತ್ತವನ್ನು ಏರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಸಾಲಮನ್ನಾ ಮೊತ್ತವನ್ನು ಏರಿಸುವ ಸಲಹೆ ನೀಡುತ್ತಲೇ ಇದ್ದರು. ಇದಲ್ಲದೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಸಹ ಇದರ ವಿಸ್ತರಣೆಯ ಸುಳಿವು ನೀಡಿದ್ದರು.
ಫೆಬ್ರವರಿ 29ರಂದು ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ರೈತರಿಗೆ 60 ಸಾವಿರ ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದರು. ಇದರಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಂಪೂರ್ಣ ಸಾಲಮನ್ನಾ ಮಾಡಲಾಗಿತ್ತು. ಸಾಲಮನ್ನಾ ಮತ್ತು ಸಾಲಪರಿಹಾರ ಕಾರ್ಯವು 2008ರ ಜೂನ್ 30ರಂದು ಅಂತಿಮಗೊಳ್ಳಲಿದೆ ಎಂದೂ ಅವರು ತಿಳಿಸಿದ್ದರು.
|