ಏರುತ್ತಿರುವ ಜಾಗತಿಕ ಕಚ್ಚಾ ತೈಲ ಬೆಲೆ ಹಿನ್ನೆಲೆಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 10 ರೂ., ಡೀಸೆಲ್ ಬೆಲೆ 5 ರೂ. ಹಾಗೂ ಎಲ್‌ಪಿಜಿ ಬೆಲೆಯನ್ನು ಸಿಲಿಂಡರಿಗೆ 50 ರೂ. ಏರಿಸುವ ಪೆಟ್ರೋಲಿಯಂ ಸಚಿವಾಲಯದ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ನಷ್ಟದಲ್ಲಿರುವ ತೈಲ ಕಂಪನಿಗಳನ್ನು ಪಾರು ಮಾಡಲು ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ಮೇಲೆ ಸೆಸ್ ಇಲ್ಲವೇ ಸರ್ಚಾರ್ಜ್ ವಿಧಿಸುವ ಸಾಧ್ಯತೆಗಳಿವೆ.
ಪರ್ಯಾಯ ಆದಾಯದ ಮೂಲವನ್ನು ಗುರುತಿಸದೆ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸುಂಕ ಕಡಿತಗೊಳಿಸುವುದು ಅಸಾಧ್ಯ ಎಂದು ವಿತ್ತ ಸಚಿವ ಪಿ.ಚಿದಂಬರಂ ಹೇಳಿದ ಹಿನ್ನೆಲೆಯಲ್ಲಿ ಈ ಹೊಸ ಪ್ರಸ್ತಾಪ ಮುಂದೆ ಬಂದಿದೆ.
ಈ ಹಣಕಾಸು ವರ್ಷದಲ್ಲಿ ಪೆಟ್ರೋಲಿಯಂ ಕ್ಷೇತ್ರಕ್ಕೆ ಸುಮಾರು 2 ಲಕ್ಷ ಕೋಟಿ ರೂ. ಆದಾಯ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಆಮದು ಮತ್ತು ಅಬಕಾರಿ ಸುಂಕ ಕಡಿತಗೊಳಿಸುವಂತೆ ಹಣಕಾಸು ಸಚಿವರ ಮನವೊಲಿಸುವಲ್ಲಿ ಪೆಟ್ರೋಲಿಯಂ ಸಚಿವ ಮುರಳಿ ದೇವೊರಾ ಸೋಮವಾರ ವಿಫಲರಾಗಿದ್ದರು.
ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ಗಳಲ್ಲಿ ಜುಲೈ ವರೆಗೆ ಮಾತ್ರವೇ ಕಚ್ಚಾ ತೈಲ ಖರೀದಿಗೆ ಹಣವಿದೆ. ಆದರೆ ಇಂಡಿಯನ್ ಆಯಿಲ್ ಬಳಿ ಸೆಪ್ಟೆಂಬರ್‌ವರೆಗೂ ಖರೀದಿಗಾಗಿ ಆರ್ಥಿಕ ಸಾಮರ್ಥ್ಯವಿದೆ.
ಈ ಹಿಂದೆ ಕಾರ್ಗಿಲ್ ಯುದ್ಧದ ಬಳಿಕ ಹೇರಿದಂತೆ ಸೆಸ್ ಅಥವಾ ಸರ್ಚಾರ್ಜ್ ವಿಧಿಸಿದರೆ ಪೆಟ್ರೋಲಿಯಂ ಕಂಪನಿಗಳ ನಷ್ಟ ಸರಿದೂಗಿಸಬಹುದು ಎಂಬುದು ಮೂಲಗಳ ಅಭಿಪ್ರಾಯ. ಮೂರು ತೈಲ ಕಂಪನಿಗಳು ದಿನಕ್ಕೆ 580 ಕೋಟಿ ರೂ.ಗಳಷ್ಟು ನಷ್ಟ ಎದುರಿಸುತ್ತಿವೆ. ಇದಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಪ್ರಸ್ತಾಪ ಮುಂದಿಟ್ಟಿರುವ ತೈಲ ಕಂಪನಿಗಳು, ಇನ್ನೊಂದು ವಾರವೂ ಕಾಯವುದು ಅಸಾಧ್ಯ ಎಂದು ಪೆಟ್ರೋಲಿಯಂ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎಸ್.ಸುಂದರೇಶನ್ ತಿಳಿಸಿದ್ದಾರೆ.
ಪೆಟ್ರೋಲಿಯಂ ಬೆಲೆಗಳ ಮೇಲಿನ ನಿಯಂತ್ರಣ ತೆಗೆದುಹಾಕುವ ಬಗ್ಗೆಯೂ ಸರಕಾರಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ರೀತಿಯಾದಲ್ಲಿ, ಪೆಟ್ರೋಲ್ ಬೆಲೆ ಲೀಟರಿಗೆ ಸುಮಾರು 15ರಿಂದ 17 ರೂ.ಗಳಷ್ಟು ಏರಬಹುದಾಗಿದ್ದು, ಜಾಗತಿಕ ಕಚ್ಚಾ ತೈಲ ಬೆಲೆ ಏರಿದಂತೆ ದೇಶದಲ್ಲಿಯೂ ಪೆಟ್ರೋಲ್ ಬೆಲೆ ಏರುತ್ತಲೇ ಇರುತ್ತದೆ. ಆದರೆ ಡೀಸೆಲನ್ನು ಇದರಿಂದ ಹೊರತುಪಡಿಸಲಾಗಿತ್ತು.
|