ಪ್ರವಾಸೋದ್ಯಮಕ್ಕಾಗಿ ವಾಹನಗಳ ಆಮದಿನ ಮೇಲಿರುವ ತೆರಿಗೆ ರಿಯಾಯಿತಿಗಳ ದುರ್ಬಳಕೆಯಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹೋಟೆಲ್‌ಗಳು, ಟ್ರಾವೆಲ್ ಏಜೆಂಟ್‌ಗಳು ಮತ್ತು ಪ್ರವಾಸೋದ್ಯಮಿಗಳು ಆಮದು ಮಾಡಿಕೊಳ್ಳುತ್ತಿರುವ ಐಷಾರಾಮಿ ಕಾರುಗಳು ಹಾಗೂ ಇತರ ವಾಹನಗಳ ಮೇಲೆ ಕೇಂದ್ರ ಸರಕಾರವು ಹಿಡಿತ ಬಿಗಿಗೊಳಿಸಿದೆ.
ರಫ್ತು ಉತ್ತೇಜನ ಬಂಡವಾಳ ಸರಕು (ಇಪಿಸಿಜಿ) ಯೋಜನೆಯಡಿಯಲ್ಲಿ ವಾಹನಗಳ ಉದ್ದೇಶಿತ ಮತ್ತು ಸಮರ್ಪಕ ಬಳಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಇಂಥ ವಾಹನಗಳನ್ನು 'ಪ್ರವಾಸ ಉದ್ದೇಶಕ್ಕೆ ಮಾತ್ರ' ಎಂದು ಕಡ್ಡಾಯವಾಗಿ ನೋಂದಣಿ ಮಾಡುವಂತೆ ಕಸ್ಟಂ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿದೇಶಾಗ ವ್ಯವಹಾರ ನಿರ್ದೇಶನಾಲಯವು ಸುತ್ತೋಲೆಯಲ್ಲಿ ತಿಳಿಸಿದೆ.
ಈ ಯೋಜನೆಯಡಿ ಆಮದು ಮಾಡಿಕೊಳ್ಳಲಾಗುವ ದುಬಾರಿ ವಾಹನಗಳನ್ನು ವಿವಿಧ ರಾಜಕಾರಣಿಗಳಿಗೆ, ನಟರಿಗೆ ಮತ್ತು ಉದ್ಯಮಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂಬ ಕುರಿತು ಸಾಕಷ್ಟು ವರದಿಗಳು ಬಂದಿದ್ದವು. ಇಂತಹ ಹಲವು ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿದ್ದ ಕಂದಾಯ ಇಲಾಖೆ, ಹಲವರಿಂದ ಸಾಕಷ್ಟು ದಂಡಶುಲ್ಕ ಮತ್ತು ಬಾಕಿ ಇರುವ ಕಸ್ಟಮ್ಸ್ ಶುಲ್ಕವನ್ನೂ ಸಂಗ್ರಹಿಸಿತ್ತು.
ಸಾಮಾನ್ಯವಾಗಿ ಇಂಥ ವಾಹನಗಳನ್ನು ಆಮದು ಮಾಡಬೇಕಿದ್ದರೆ ಶೇ.100ರಷ್ಟು ಆಮದು ಸುಂಕ ತೆರಬೇಕಾಗುತ್ತದೆ. ಈ ಯೋಜನೆಯಡಿಯಲ್ಲಿ ಶೇ.5ರಷ್ಟು ರಿಯಾಯಿತಿ ಪಡೆಯಬಹುದಾಗಿದೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಣೇಶ್ ಗುಪ್ತಾ ತಿಳಿಸಿದ್ದಾರೆ.
|