ಚಿಲ್ಲರೆ ಇಂಧನ ಮಾರಾಟ ದರ ಹೆಚ್ಚಿಸುವ ಮೂಲಕ, ತೈಲ ಸಂಸ್ಥೆಗಳು ಅನುಭವಿಸುತ್ತಿರುವ ನಷ್ಟವನ್ನು ಭರಿಸುವ ನಿರ್ಧಾರವನ್ನು ಶನಿವಾರದೊಳಗೆ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವ ಮುರಳಿ ದೇವೊರ ಹೇಳಿದ್ದಾರೆ.
ಕಚ್ಚಾತೈಲ ಬೆಲೆ ಏರಿಕೆಯಿಂದ ಉಂಟಾಗಿರುವ ಸಮಸ್ಯೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುವಾರ ಪರಿಶೀಲಿಸಿದರು.
ಶನಿವಾರದೊಳಗಾಗಿ ನಾವು ಈ ಕುರಿತು ಒಂದು ನಿರ್ಧಾರಕ್ಕೆ ಬರಲಿದ್ದೇವೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪ್ರಮುಖ ಸಚಿವರೊಂದಿಗೆ ನಡೆದ ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನುಡಿದರು.
ಸುಂಕ ಕಡಿತದೊಂದಿಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯು ಕಂದಾಯ ನಷ್ಟವನ್ನು ತುಂಬಿಕೊಳ್ಳಲು ಸರಕಾರಿ ಸ್ವಾಮ್ಯದ ತೈಲಸಂಸ್ಥೆಗಳಿಗೆ ಸಹಕಾರಿಯಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಗನಕ್ಕೇರಿದ್ದು, ಈ ಆರ್ಥಿಕ ವರ್ಷದಲ್ಲಿ ತೈಲ ಸಂಸ್ಥೆಗಳು 2,24,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮತ್ತು ತೈಲ ಸಂಸ್ಥೆಗಳು ಅನುಭವಿಸುತ್ತಿರುವ ನಷ್ಟದ ದಾಖಲೆ ಪತ್ರಗಳನ್ನು ಪ್ರಧಾನಿಯವರು ಪರಿಶೀಲಿಸಿದ್ದು, ಯುದ್ಧೋಪಾದಿಯಲ್ಲಿ ನಾವು ತೈಲ ಸಂಸ್ಥೆಗಳಿಗೆ ಸಹಾಯ ಮಾಡಬೇಕಾಗಿದೆ ಎಂಬ ಅಂಶವನ್ನು ಅವರು ಅರಿತುಕೊಂಡಿದ್ದಾರೆ ಎಂದು ದೇವೊರ ನುಡಿದರು.
|