ಜರ್ಮನಿ ಮೂಲದ ಡ್ಯೆಟುಶ್ಚ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿಸಿರುವ ಭಾರತೀಯ ಅಂಚೆ ಇಲಾಖೆಯು ತನ್ನ ರಾಷ್ಟ್ರಾದ್ಯಂತ ಸೇವಾ ಜಾಲದ ಮೂಲಕ ಗ್ರಾಮೀಣ ವಲಯದಲ್ಲಿ ಗೃಹ ಸಾಲ ವ್ಯವಹಾರ ಪ್ರಾರಂಭಿಸಲು ಉದ್ದೇಶಿಸಿದೆ
ಡೆಟ್ಯುಶ್ಚ್ ಪೊಸ್ಟ್ ಬ್ಯಾಂಕಿನ ಸಹ ಸಂಸ್ಥೆಯೊಂದಿಗೆ ಮಾತುಕತೆಗಳನ್ನು ಮುಂದುವರಿಸಿದ್ದು, ಡೆಟ್ಯುಶ್ಚ್ ಬ್ಯಾಂಕ್ ವತಿಯಿಂದ ನೀಡುವ ಸಾಲವನ್ನು ಭಾರತೀಯ ಅಂಚೆ ಕಚೇರಿಗಳ ಮೂಲಕ ವಿತರಿಸುವುದಕ್ಕೆ ಎರಡು ಪಕ್ಷಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗುವುದು. ಪ್ರಾರಂಭಿಕ ಹಂತದಲ್ಲಿ ಆಯ್ದ ಪೊಸ್ಟ್ ಆಫೀಸ್‌ಗಳ ಮೂಲಕ ಗೃಹಸಾಲವನ್ನು ವಿತರಿಸಲಾಗುವುದು ಎಂದು ಅಂಚೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ಅಂಚೆ ಇಲಾಖೆಯು ಈಗಾಗಲೇ ಭಾರತೀಯ ಸ್ಟೇಟ್ ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು. ಒಪ್ಪಂದದನ್ವಯ ಅಂಚೆ ಕಚೇರಿಗಳ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಬಹುದು. ಅಲ್ಲದೇ ಶೈಕ್ಷಣಿಕ, ಗೃಹ ಮತ್ತು ವೈಯಕ್ತಿಕ ಸಾಲಗಳಿಗೆ ಅಂಚೆ ಇಲಾಖೆಯ ಮೂಲಕ ಅರ್ಜಿ ಸಲ್ಲಿಸಬಹುದು ಅಲ್ಲದೇ ಮಂಜೂರಿಯಾಗಿರುವ ಸಾಲಗಳನ್ನು ಅಂಚೆ ಇಲಾಖೆಯ ಮೂಲಕ ಪಡೆಯಬಹುದು.
ರಾಷ್ಟ್ರಾದ್ಯಂತ 1.55 ಲಕ್ಷಕ್ಕೂ ಮಿಕ್ಕಿ ಇರುವ ಅಂಚೆ ಕಚೇರಿಗಳನ್ನು ಹೊಂದಿರುವ ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಪ್ರದೇಶಗಳಲ್ಲಿ ಗೃಹ ಸಾಲ ನೀಡುವುದಕ್ಕೆ ಇತರ ಬ್ಯಾಂಕುಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಯೋಚಿಸುತ್ತಿದೆ.
ಯುಟಿಐ ಎಂಎಫ್, ಪ್ರಿನ್ಸಿಪಲ್ ಪಿಎನ್‌ಬಿ, ಎಎಂಸಿ, ಪ್ರುಡೆನ್ಶಿಯಲ್ ಐಸಿಐಸಿಐ ಮತ್ತು ಎಸ್‌ಬಿಐ ಮ್ಯುಚುವಲ್ ಫಂಡ್ ಕಂಪನಿಗಳ ಯುನಿಟ್‌ಗಳನ್ನು ಅಂಚೆ ಇಲಾಖೆ ಈಗಾಗಲೇ ಒಪ್ಪಂದದನ್ವಯ ಮಾರಾಟ ಮಾಡುತ್ತಿದೆ.
|