ತೈಲ ಕಂಪನಿಗಳು ಎದುರಿಸುತ್ತಿರುವ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆಲೆ ಏರಿಕೆಯ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಯುಪಿಎ ವಿಫಲವಾಗಿರುವುದರೊಂದಿಗೆ ಬೆಲೆ ಏರಿಕೆಯ ನಿರ್ಧಾರ ಕನಿಷ್ಠ ಒಂದು ವಾರದ ಮಟ್ಟಿಗೆ ಮುಂದೂಡಲ್ಪಟ್ಟಿದೆ.
ತೈಲ ಕಂಪನಿಗಳು ಎದುರಿಸುತ್ತಿರುವ 2,25,040 ಕೋಟಿ ರೂ. ನಷ್ಟವನ್ನು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸದೆ ಮತ್ತು ಸುಂಕ ಕಡಿತಗೊಳಿಸದೆ ಸರಿದೂಗಿಸುವ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ಚರ್ಚೆ ನಡೆಸಿದರಾದರೂ, ಸ್ಪಷ್ಟ ತೀರ್ಮಾನ ಕೈಗೊಳ್ಳುವಲ್ಲಿ ವಿಫಲರಾದರು.
ಈ ಬಗ್ಗೆ ಕೇಂದ್ರ ಸಂಪುಟವು ಶನಿವಾರ ಸಭೆ ಸೇರುವ ಸಾಧ್ಯತೆಯಿದೆ ಎಂದು ಗುರುವಾರ ಹೇಳಿದ್ದ ಪೆಟ್ರೋಲಿಯಂ ಸಚಿವ ಮುರಳಿ ದೇವೊರಾ, ಈ ಸಭೆ ಯಾವುದೇ ತೀರ್ಮಾನಕ್ಕೆ ಬಾರದ ಹಿನ್ನೆಲೆಯಲ್ಲಿ ಮುಂಬಯಿಗೆ ಮರಳಿದ್ದಾರೆ.
ಹಣದುಬ್ಬರವು 45 ತಿಂಗಳಷ್ಟು ಅಧಿಕ ಪ್ರಮಾಣಕ್ಕೇರಿರುವುದರಿಂದ ಕಸ್ಟಮ್ಸ್ ಮತ್ತು ಅಬಕಾರಿ ಸುಂಕ ಕಡಿತಗೊಳಿಸುವ ಯಾವುದೇ ನಿರ್ಧಾರವನ್ನು ವಿತ್ತ ಸಚಿವ ಪಿ.ಚಿದಂಬರಂ ಬಲವಾಗಿ ವಿರೋಧಿಸಿದ್ದರು. ಅಂತೆಯೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಿದರೂ ಅದು ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗುತ್ತದೆ ಎಂಬ ಆತಂಕದಲ್ಲಿ ಅದನ್ನೂ ವಿರೋಧಿಸಿದ್ದರು. ಇದು ಬೆಲೆ ಏರಿಕೆ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ಸಮಸ್ಯೆಗೆ ಕಾರಣವಾಗಿದೆ.
ಈ ವಾರ ಯಾವುದೇ ಕ್ರಮ ನಿರೀಕ್ಷಿಸಬೇಕಾಗಿಲ್ಲ. ಬಹುಶಃ ರೋಗಿ ಸತ್ತ ಬಳಿಕವಷ್ಟೇ ಚಿಕಿತ್ಸೆ ಅಂತಿಮಗೊಳಿಸಲಾಗುತ್ತದೆ ಎಂದು ತೈಲ ಕ್ಷೇತ್ರದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
|