ನವದೆಹಲಿ: ಕಾರು ಉತ್ಪಾದನಾ ರಂಗದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಡಿಯಾ ಲಿಮಿಟೆಡ್ ಸಂಸ್ಥೆಯ ಮೇ ತಿಂಗಳಲ್ಲಿನ ಒಟ್ಟು ವಾಹನ ಮಾರಾಟದಲ್ಲಿ 59,400 ಘಟಕಗಳಿಂದ 69,001 ಘಟಕಗಳಿಗೆ ಅಂದರೆ, ಶೇ.16.2ರಷ್ಟು ಏರಿಕೆಯಾಗಿದೆ.
ಮೇ ತಿಂಗಳಲ್ಲಿ ತನ್ನ ದೇಶೀಯ ಮಾರಾಟದಲ್ಲಿ ಶೇ.14.6 ಹೆಚ್ಚಳ ಕಂಡಿದ್ದು, 64,143 ಘಟಕಕ್ಕೆ ತಲುಪಿದೆ ಎಂದು ಕಂಪೆನಿಯ ಹೇಳಿಕೆ ತಿಳಿಸಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಸಂಸ್ಥೆಯ ಮಾರಾಟವು 55,952 ಯುನಿಟ್ ದಾಖಲಾಗಿತ್ತು.
ಮಾರುತಿಯ ಎಂ800 ಮಾದರಿ ಕಾರು ಈ ವರ್ಷದ ಮೇ ತಿಂಗಳಲ್ಲಿ 6,830 ಘಟಕಗಳು ಮಾರಾಟವಾಗಿದ್ದರೆ, ಕಳೆದ ವರ್ಷ ಇದೇ ತಿಂಗಳಲ್ಲಿ 5,456 ಕಾರುಗಳು ಮಾರಾಟವಾಗಿದ್ದವು. ಆಲ್ಟೋ, ಜೆನ್ ಎಸ್ಟಿಲ್ಲೊ, ವ್ಯಾಗನ್ ಆರ್ ಮತ್ತು ಸ್ವಿಪ್ಟ್ ಮಾದರಿಗಳನ್ನು ಒಳಗೊಂಡ ಎ2 ವಿಭಾಗ ಒಟ್ಟಾಗಿ 44, 539 ಘಟಕ ಮಾರಾಟವಾಗಿದ್ದು ಶೇ.14.5ರಷ್ಟು ವೃದ್ಧಿ ಸಾಧಿಸಿದೆ. ಕಳೆದ ವರ್ಷ ಇವುಗಳ ಮಾರಾಟ 38,889 ಘಟಕವಾಗಿತ್ತು.
ಎಸ್ಎಕ್ಸ್4 ಮತ್ತು ಸ್ವಿಪ್ಟ್ ಡಿಸೈರ್ ಒಳಗೊಂಡ ಎ3 ವಿಭಾಗದ 5,946 ಕಾರುಗಳು ಮಾರಾಟವಾಗಿದ್ದು ಶೇ.18.7ರ ಏರಿಕೆ ದಾಖಲಿಸಿದೆ. ಕಳೆದ ವರ್ಷ ಈ ಕಾರುಗಳ ಮಾರಾಟದ ಸಂಖ್ಯೆ 5,009 ಆಗಿತ್ತು. ಮೇ ತಿಂಗಳ ರಪ್ತೂ ಸಹ 4,858 ಘಟಕಗಳಿಗೆ ಏರಿಕೆಯಾಗಿದೆ. ಕಳೆದ ವರ್ಷ ಈ ಕಾರುಗಳ ರಫ್ತು 3,448 ಘಟಕಗಳಾಗಿದ್ದವು.
|