ನವದೆಹಲಿ: ಜಾಗತಿಕ ಕಚ್ಚಾ ತೈಲ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಭಾರತದ ತೈಲ ವಿತರಣಾ ಕಂಪನಿಗಳು ಎದುರಿಸುತ್ತಿರುವ ನಷ್ಟವನ್ನು ತಗ್ಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಕೇಂದ್ರ ಸಂಪುಟವು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಮ್ಮತಿಸಿದ್ದು, ಪ್ರತೀ ಲೀಟರೊಂದರ ಪೆಟ್ರೋಲ್‌ಗೆ ರೂ.5, ಡೀಸೆಲ್‌ಗೆ ರೂ. 3 ಏರಿಸಿದೆ. ಅಡುಗೆ ಅನಿಲ ಸಿಲಿಂಡರ್ ಒಂದರ ರೂಪಾಯಿ 50 ಏರಿಸಲಾಗಿದೆ.
ಈ ವಿಚಾರವನ್ನು ಪೆಟ್ರೋಲಿಯಂ ಸಚಿವ ಮುರಳಿ ದೇವೊರ ಪತ್ರಿಕಾ ಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಆದರೆ, ಸೀಮೆ ಎಣ್ಣೆ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನೂತನ ಬೆಲೆಗಳು ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ.
ಬೆಲೆ ಏರಿಕೆಯು ವಿವಿಧ ನಗರಗಳಲ್ಲಿ ಕೆಳಗಿನಂತಿದೆ. ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ದೆಹಲಿಯಲ್ಲಿ ಲೀಟರ್‌ಗೆ 50.56 ರೂ. ಮತ್ತು 34.80 ರೂ., ಮುಂಬೈನಲ್ಲಿ 55.54 ರೂ., ಮತ್ತು 39.12ರೂ ಹಾಗೂ ಚೆನ್ನೈನಲ್ಲಿ 54.64 ರೂ.ಹಾಗೂ 37.44 ರೂ. ಆಗಿದೆ.
ಪೆಟ್ರೋಲ್, ಡೀಸೆಲ್ ದರಗಳ ಹೆಚ್ಚಳದಿಂದ ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇನ್ನಷ್ಟು ಪೆಟ್ಟು ನೀಡಬಹುದೆಂದು ಭಾವಿಸಲಾಗಿದೆ. ಜತೆಗೆ ಅಡುಗೆ ಅನಿಲ ಪ್ರತಿ ಸಿಲಿಂಡರ್‌ಗೆ 50 ರೂ. ಹೆಚ್ಚಳವೂ ಗ್ರಾಹಕರಿಗೆ ಆಘಾತಕಾರಿಯಾಗಿ ಪರಿಣಮಿಸಿದೆ. ಡೀಸೆಲ್ ದರ ಹೆಚ್ಚಳದಿಂದ ಸರಕು ಸಾಗಣೆಯ ವೆಚ್ಚವೂ ಹೆಚ್ಚುವುದರಿಂದ ಆಹಾರಪದಾರ್ಥಗಳ ದರ ಏರಿಕೆಯಾಗುವುದೆಂದು ನಿರೀಕ್ಷಿಸಲಾಗಿದೆ.
ಸಭೆಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ, ರಕ್ಷಣಾ ಸಚಿವ ಆಂಟೊನಿ, ವಿತ್ತಸಚಿವ ಪಿ.ಚಿದಂಬರಂ, ಪೆಟ್ರೋಲಿಯಂ ಸಚಿವ ಮುರಳಿ ದೇವೋರಾ ಮತ್ತು ರೈಲ್ವೆ ಸಚಿವ ಲಾಲು ಪ್ರಸಾದ್, ಸಾರಿಗೆ ಸಚಿವ ಟಿ.ಆರ್. ಬಾಲು ಉಪಸ್ಥಿತರಿದ್ದರು
ಈ ಹಣಕಾಸು ವರ್ಷದಲ್ಲಿ ತೈಲ ವಿತರಣಾ ಕಂಪನಿಗಳು ಒಟ್ಟು 246000 ಕೋಟಿ ರೂ. ನಷ್ಟ ಅನುಭವಿಸಲಿದೆ ಎಂದು ಅಂದಾಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರವು ತ್ವರಿತ ನಿರ್ಣಯ ಕೈಗೊಂಡಿದೆ
ಶೇ.5 ಇದ್ದ ಕಚ್ಚಾ ತೈಲದ ಆಮದು ಸುಂಕವನ್ನು ಶೂನ್ಯಕ್ಕಿಳಿಸಲಾಗಿದೆ. ಸರಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ಸೀಮಾ ಸುಂಕವನ್ನು ಶೇ.7.5ರಿಂದ 2.5ಕ್ಕಿಳಿಸಿದೆ. ಇದಲ್ಲದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಲೀಟರೊಂದರ ಒಂದು ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ.
|