ವಾರ್ಷಿಕ ವೇತನ ಹೆಚ್ಚಳದ ವೇಳೆಗೆ ಕೈತುಂಬ ಸಂಬಳ ನೀಡುತ್ತಿದ್ದ ಇನ್ಫೋಸಿಸ್, ಈ ವರ್ಷದ ತನ್ನ ಉದ್ಯೋಗಿಳ ವೇತನ ಹೆಚ್ಚಳದಲ್ಲಿ ಇಳಿಕೆ ಮಾಡಿದೆ. ಶೇಕಡಾವಾರು ಎರಡಂಕಿ ಇರುತ್ತಿದ್ದ ಹೆಚ್ಚಳ ಈ ಬಾರಿ ಕೆಲವು ಪ್ರಕರಣಗಳಲ್ಲಿ ಒಂದಂಕಿಗೆ ಇಳಿದಿದೆ.
ಸಂಸ್ಥೆಯು ಈ ವರ್ಷ ಸರಾಸರಿ ಶೇ8 ರಿಂದ 10ರ ತನಕ ಸಂಬಳ ಏರಿಸಿದೆ. ಅದೇ, ಕಳೆದ ವರ್ಷದ ಅಂಕೆ ಸಂಖೆಗಳನ್ನು ಗಮನಿಸಿದರೆ, ಈ ಸಂಖ್ಯೆ ಸರಾಸರಿ ಶೇ 18-20 ರಷ್ಟು ಕೆಲವು ಪ್ರಕರಣಗಳಲ್ಲಿ ಶೇ40-50ರಷ್ಟು ನೀಡಿತ್ತು ಎಂಬುದಾಗಿ ಅನಾಮಧೇಯವಾಗಿ ಉಳಿಯಲಿಚ್ಛಿಸುವ ಸಂಸ್ಥೆಯ ಉದ್ಯೋಗಿಯೊಬ್ಬರು ಹೇಳಿದ್ದಾರೆ.
ಇದು ತಾಂತ್ರಿಕ ವಲಯದ ಹೆಚ್ಚಳ ಪ್ರವೃತ್ತಿ, ಈ ವರ್ಷ ನಾವು ಕಡಿಮೆ ಮೊತ್ತದ ಹೆಚ್ಚಳ ಪಡೆದಿದ್ದೇವೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ ಈ ಕುರಿತು ಹೊರಗಿನವರೊಂದಿಗೆ ಚರ್ಚಿಸದಂತೆ ಕಂಪೆನಿಯು ಇ-ಮೇಲ್ ಕಳುಹಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಇದು ಇನ್ಫೋಸಿಸ್ ಮಾತ್ರವಲ್ಲ, ಎಲ್ಲಾ ದೊಡ್ಡದೊಡ್ಡ ತಾಂತ್ರಿಕ ಕಂಪೆನಿಗಳಲ್ಲೂ ಈ ಪ್ರವೃತ್ತಿ ಕಂಡುಬಂದಿದೆ. ಮಾರುಕಟ್ಟೆ ಕುಸಿತ, ಪರಭಾರೆ ವೆಚ್ಚಹೆಚ್ಚಳ, ಬಿಲ್ಲಿಂಗ್ ಒತ್ತಡ ಇವುಗಳೆಲ್ಲವೂ ಕಂಪೆನಿಯ ಲಾಭದ ಮೇಲೆ ಪರಿಣಾಮ ಬೀರಿದ್ದು, ಅದು ವೇತನ ಹೆಚ್ಚಳದ ಮೇಲೆ ಪರಿಣಾಮ ಬೀರಿದೆ.
ಇದಲ್ಲದೆ ಅಮೆರಿಕದ ಆರ್ಥಿಕ ಹಿಂಜರಿತವೂ ಇದಕ್ಕೆ ಕಾರಣ. ಐಟಿ ಕಂಪೆನಿಗಳು ಹೆಚ್ಚೂಕಮ್ಮಿ ಶೇ.60ರಷ್ಟು ಆದಾಯವನ್ನು ಅಮೆರಿಕದಿಂದ ಪಡೆಯುತ್ತವೆ ಎಂದು ಕನ್ಸಲ್ಟೇಶನ್ ಸಂಸ್ಥೆಯೊಂದರ ಆಡಳಿತ ನಿರ್ದೇಶಕ ಮೊಹಲ್ ಲಾಲ್ ಹೇಳಿದ್ದಾರೆ.
|