ಬೆರ್ಹಾಂಪುರ್ : ಕಚ್ಛಾ ತೈಲ ಮತ್ತು ಸರಕು ಬೆಲೆಗಳಲ್ಲಿನ ಏರಿಕೆಯಂತಹ ಅಂತಾರಾಷ್ಟ್ರೀಯ ಹಾಗೂ ದೇಶೀಯ ಅಂಶಗಳ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿ ಈ ಹಣಕಾಸು ವರ್ಷದಲ್ಲಿನ ತನ್ನ ಆರ್ಥಿಕ ಬೆಳವಣಿಗೆ ಅಂದಾಜನ್ನು 8.5ಶೇ ದಿಂದ 8ಶೇ.ಗೆ ಇಳಿಸಿದೆ.
ಜನವರಿಯಲ್ಲಿ ಸಮಿತಿ 8.5ಶೇ.ದ ಬೆಳವಣಿಗೆ ದರದ ಅಂದಾಜು ಮಾಡಿತ್ತು. ಅಲ್ಲಿಂದೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮತ್ತು ಸರಕು ಬೆಲೆಗಳು ಗಣನೀಯವಾಗಿ ಏರಿಕೆಯಾಗಿದೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ಅಂಶಗಳ ಹಿನ್ನೆಲೆಯಲ್ಲಿ 2008-09ರಲ್ಲಿನ ಆರ್ಥಿಕ ಬೆಳವಣಿಗೆ ದರ ಸುಮಾರು 8ಶೇ.ದಲ್ಲಿ ಉಳಿಯಲಿದೆ ಎಂದು ಸಮಿತಿ ಅಧ್ಯಕ್ಷ ಸಿ ರಂಗರಾಜನ್ ತಿಳಿಸಿದ್ದಾರೆ.
ಕಳೆದ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆ 9ಶೇ. ದರದಲ್ಲಿ ಬೆಳವಣಿಗೆ ಸಾಧಿಸಿತ್ತು. ಇದರಿಂದ ಪ್ರೇರಣೆಗೊಂಡ ಹಣಕಾಸು ಸಚಿವ ಪಿ. ಚಿದಂಬರಂ ಈ ವರ್ಷ 8.5ಶೇ.ದ ಆರ್ಥಿಕ ಬೆಳವಣಿಗೆ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದೇ ವೇಳೆ ರಂಗರಾಜನ್, ಇನ್ನು 3-4 ತಿಂಗಳಲ್ಲಿ ಹಣದುಬ್ಬರ 6ಶೇ.ಗೆ ಇಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಮಳೆ ಚೆನ್ನಾಗಿ ಬಿದ್ದರೆ, ಹಣದುಬ್ಬರ ದರ ಇನ್ನಷ್ಟು ಇಳಿಯುವ ನಿರೀಕ್ಷೆ ಇದ್ದು, ಸುಮಾರು 5.5ಶೇ.ಗೆ ಬರುವ ಸಂಭವವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ ಹಣದುಬ್ಬರ ಏರಿಕೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಅಂಶಗಳನ್ನು ಹೊಣೆಯಾಗಿಸಿದ ಅವರು, ಬೆಲೆಗಳು, ವಿಶೇಷವಾಗಿ ಆಹಾರ ಬೆಲೆಗಳು ಸರಬರಾಜು ನಿಟ್ಟಿನ ಅಂಶಗಳ ಕಾರಣ ಬಹುವಾಗಿ ಏರಿಕೆ ಕಾಣುತ್ತಿದೆ ಎಂದು ವಿವರಿಸಿದರು.
|