ಗಗನಾಭಿಮುಖವಾಗಿ ಏರುತ್ತ ಸುಮಾರು ಶೇ.ಎಂಟರ ಗಡಿಯನ್ನು ತಲುಪಿ ಅನಿಶ್ಚಿತ ಸ್ಥಿತಿಯಲ್ಲಿರುವ ದೇಶದ ಹಣದುಬ್ಬರವು ಮುಂದಿನ ಕೆಲವು ತಿಂಗಳುಗಳಲ್ಲಿ ಮಂದಗೊಳ್ಳಲಿದೆ ಎಂದು ಪ್ರಮುಖ ಆರ್ಥಿಕತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಣದುಬ್ಬರ ಇಳಿಕೆಯಾಗುವ ಲಕ್ಷಣಗಳು ಸಾಕಷ್ಟು ಕಂಡುಬರುತ್ತಿದ್ದು, ಆಹಾರ ಬೆಲೆಗಳು ಸ್ಥಿರೀಕರಣಗೊಳ್ಳಲು ಪ್ರಾರಂಭಗೊಂಡಿದೆ ಅಲ್ಲದೆ ಕೆಲವು ಮೆಟಲ್ ಬೆಲೆಗಳಲ್ಲಿ ಕೂಡಾ ಇಳಿಕೆ ಉಂಟಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಹಣದುಬ್ಬರ ಪ್ರಮಾಣವು ಶೇ.5ರಿಂದ 5.5ಕ್ಕೆ ಇಳಿಕೆಗೊಳ್ಳಲಿದೆ ಎಂದು ಬಿರ್ಲಾ ಸಮೂಹದ ಮುಖ್ಯ ಆರ್ಥಿಕತಜ್ಞ ಅಜಿತ್ ರಾನಡೆ ಮಹಾರಾಷ್ಟ್ರ ಆರ್ಥಿಕ ಅಭಿವೃದ್ಧಿ ಮಂಡಳಿಯಿಂದ ಸಂಘಟಿಸಲ್ಪಟ್ಟಿದ್ದ ಸಭೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೇಪೋ ದರವನ್ನು ಹೆಚ್ಚಿಗೊಳಿಸುವ ಮುನ್ನ ಈ ಸಭೆಯನ್ನು ನಡೆಸಲಾಗಿತ್ತು.
ಪ್ರಸಕ್ತ ಹಣದುಬ್ಬರ ದರವು ಏರುಮುಖವಾಗಿದ್ದರೂ ಇದಕ್ಕೆ ಗಾಬರಿ ಪಡುವಂತಹ ಅಗತ್ಯವಿಲ್ಲ ಎಂದ ಅವರು, ಹಣದುಬ್ಬರ ಏರಿಕೆಯನ್ನು ತಡೆಯಲು ಬಡ್ಡಿದರವನ್ನು ಹೆಚ್ಚುಗೊಳಿಸಿದಲ್ಲಿ ಇದು ದೇಶದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿಧಾನವಾಗಿ ಹೋಗುತ್ತಿರುವ ಕಾರಿಗೆ ಬ್ರೇಕ್ ಹಾಕಿದರೆ ಅದು ನಿಂತು ಬಿಡುತ್ತದೆಯೇ ಹೊರತು ಮತ್ತಷ್ಟು ವೇಗವಾಗಿ ಹೋಗುವುದಿಲ್ಲ ಎಂಬ ಉದಾಹರಣೆಯ ಮೂಲಕ ರಾನಡೆ ವಿವರಿಸಿದ್ದಾರೆ.
|