ನೆರೆಯ ರಾಷ್ಟ್ರ ಪಾಕಿಸ್ತಾನದಿಂದ ಅಗ್ಗದ ಸಿಮೆಂಟನ್ನು ಆಮದು ಮಾಡಿಕೊಲ್ಳಲು ದೆಹಲಿ ಸರಕಾರವು ಚಿಂತನೆ ನಡೆಸುತ್ತಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ದೇಶದಲ್ಲಿನ ಸಿಮೆಂಟ್ ಬೆಲೆಯು ಹೆಚ್ಚಳವಾಗಿರುವುದರಿಂದ, 2010ರಲ್ಲಿ ನಡೆಯುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸಲು ಪಾಕಿಸ್ತಾನದಿಂದ ಸಿಮೆಂಟ್ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಕೇಂದ್ರಕ್ಕೆ ಮನವಿ ಪತ್ರವನ್ನು ಕಳುಹಿಸಲಾಗಿದ್ದು, ಕೇಂದ್ರ ಅನುಮೋದನೆಗಾಗಿ ಸರಕಾರವು ಕಾಯುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಿಳಿಸಿದ್ದಾರೆ.
ಹಣದುಬ್ಬರ ಏರಿಕೆಯಿಂದಾಗಿ ನಿರ್ಮಾಣ ಸಾಮಾಗ್ರಿಗಳಾದ ಸಿಮೆಂಟ್, ಸ್ಟೀಲ್ ಬೆಲೆಗಳಲ್ಲಿ ಏರಿಕೆ ಉಂಟಾಗಿದ್ದು, ಈ ನಿಟ್ಟಿನಲ್ಲಿ ಪ್ರಖ್ಯಾತ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಮೂಲಸೌಕರ್ಯ ಯೋಜನೆಗಳ ವೆಚ್ಚವೂ ಕೂಡಾ ಹೆಚ್ಚಳವಾಗಲಿದೆ.
ಈ ನಿಟ್ಟಿನಲ್ಲಿ, ಇದಕ್ಕೆ ಪೂರಕ ವ್ಯವಸ್ಥೆಯನ್ನು ಮಾಡದಿದ್ದಲ್ಲಿ ಯೋಜನೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂಬುದಾಗಿ ಸರಕಾರವು ಅಭಿಪ್ರಾಯಪಟ್ಟಿದೆ.
ಕಾಮನ್‌ವೆಲ್ತ್ ಕ್ರೀಡಾ ಕೂಟಕ್ಕೆ ಸಂಬಂಧಿಸಿದ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿನ ಮಂದಗತಿಯ ಕುರಿತಾಗಿ ದೆಹಲಿ ಸರಕಾರವನ್ನು ಇತ್ತೀಚೆಗೆ ಕೇಂದ್ರವು ತರಾಟೆಗೆ ತೆಗೆದುಕೊಂಡಿತ್ತು ಮತ್ತು ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪ್ರಾಧಿಕಾರಕ್ಕೆ ಒತ್ತಡ ಹೇರಿತ್ತು.
|