ಭಾರತೀಯರಾದ ಟೀನಾ ಅಂಬಾನಿ ಮತ್ತು ಉಷಾ ಮಿತ್ತಲ್ ಅವರುಗಳು ವಿಶ್ವದ ಹತ್ತು ಶತಕೋಟ್ಯಾಧಿಪತಿಗಳ ಪ್ರಭಾವಿ ಪತ್ನಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಟೀನಾ ಹಾಗೂ ಉಷಾ ಅವರು ತಮ್ಮದೇ ವ್ಯಕ್ತಿತ್ವದಿಂದ ಪ್ರಭಾವೀ ವರ್ಚಸ್ಸು ಹೊಂದಿದ್ದಾರೆ ಎಂದು ಈ ಪಟ್ಟಿ ಮಾಡಿರುವ ಫೋರ್ಬ್ಸ್ ಪತ್ರಿಕೆ ಹೇಳಿದೆ.
ಟೀನಾ ಅಂಬಾನಿ, ವಿಶ್ವದ ಅರನೆಯ ಸಿರಿವಂತ ಅನಿಲ್ ಅಂಬಾನಿಯವರನ್ನು ವರಿಸಿದ್ದರೆ, ಉಷಾ ಅವರು ಸ್ಟೀಲ್ ಉದ್ಯಮಿ ವಿಶ್ವದ ಧನವಂತರಲ್ಲಿ ನಾಲ್ಕನೆ ಸ್ಥಾನದಲ್ಲಿರುವ ಲಕ್ಷೀಮಿತ್ತಲ್ ಅವರ ಪತ್ನಿ.
"ಟೀನಾ ಅಂಬಾನಿ, ಅನಿಲ್ ಅಂಬಾನಿಯವರನ್ನು ವರಿಸುವ ಮುನ್ನವೇ ಖ್ಯಾತರಾಗಿದ್ದರು. ಅವರು ಬಾಲಿವುಡ್‌ನಲ್ಲಿ ತನ್ನದೇ ಛಾಪೊತ್ತಿದ್ದ ನಟಿ. 1978ರಲ್ಲಿ ಟದೇಸ್ ಪರ್ದೇಸ್ಟ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ. 53ರ ಹರೆಯದ, ಇಬ್ಬರು ಮಕ್ಕಳ ತಾಯಿಯಾಗಿರುವ ಇವರು ಭಾರತೀಯ ಸಮಕಾಲೀನ ಕಲೆಗಳ ಪ್ರೋತ್ಸಾಹಕರಾಗಿದ್ದಾರೆ" ಎಂದು ಫೋರ್ಬ್ಸ್ ಪತ್ರಿಕೆ ಹೇಳಿದೆ.
ಉಷಾ ಮಿತ್ತಲ್ ತನ್ನ 21ರ ಹರೆಯದಲ್ಲಿ ಲಕ್ಷ್ಮೀ ಮಿತ್ತಲ್ ಅವರ ಕೈಹಿಡಿದಿದ್ದಾರೆ. ಆವರು ತನ್ನ ಪತಿಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಶ್ಲಾಘನೆಗೆ ಪಾತ್ರರಾಗಿದ್ದಾರೆ. ವಿಶ್ವದ ಅತಿದೊಡ್ಡ ಸ್ಟೀಲ್ ಸಂಸ್ಥೆಯಾಗಿರುವ ಅರ್ಸೆಲರ್ ಮಿತ್ತಲ್ ಅವರಿಗೆ ಅತಿದೊಡ್ಡ ಜವಾಬ್ದಾರಿ ನೀಡಿತ್ತು. ಒಂದೊಮ್ಮೆ ನಿರ್ದೇಶಕ ಮಂಡಳಿಯು ಶಾಶ್ವತವಾಗಿ ಗೈರುಹಾಜರಾದರೆ, ಅಥವಾ ಅವರ ಜವಾಬ್ದಾರಿಯನ್ನು ತಡೆಹಿಡಿಯಲ್ಪಟ್ಟಿದ್ದರೆ, ಸಂಸ್ಥೆಯ ವ್ಯವಹರಣೆಯ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿತ್ತು ಎಂಬ ಅಂಶವನ್ನು ಪತ್ರಿಕೆ ಪ್ರಸ್ತಾಪಿಸಿದೆ.
ಅವರು 15 ವರ್ಷಗಳಿಂದ ತನ್ನ ಪತಿಯ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಇಂಡೋನೇಶ್ಯದಲ್ಲಿ ತಾನೆ ಸ್ವಯಂ ಒಂದು ಸ್ಥಾವರವನ್ನು ನಡೆಸುತ್ತಿದ್ದರು ಎಂಬುದಾಗಿ ಪತ್ರಿಕೆ ಹೇಳಿದೆ.
ಈ ಪಟ್ಟಿಯಲ್ಲಿ ಸ್ಥಾನಪಡೆದ ಇತರರೆಂದರೆ, ಒಬ್ಬ ಕತೆಗಾರ್ತಿ, ಫ್ಯಾಶನ್ ಡಿಸೈನರ್, ಒಬ್ಬ ನಟಿ ಹಾಗೂ ಇನ್ನೋರ್ವ ಬಯೋಮೆಡಿಕಲ್ ಇನ್‌ಫಾರ್ಮಾಟಿಕ್ಸ್ ವಿದ್ಯಾರ್ಥಿನಿ ಸೇರಿದ್ದಾರೆ.
ಒರೇಕಲ್ ಸಿಇಓ ಲಾರಿ ಎಲ್ಲಿಸನ್ ಅವರ ಪತ್ನಿ ಮೆಲನಿ ಕ್ರಾಫ್ಟ್(ಕತೆಗಾರ್ತಿ), ಗೂಗಲ್ ಸಹ ಸಂಸ್ಥಾಪಕ ಲಾರಿ ಪೇಜ್ ಅವರ ಪತ್ನಿವ ಲೂಸಿ ಸೌತ್‌ವರ್ತ್(ಬಯೋಮೆಡಿಕಲ್ ಇನ್‌ಫಾರ್ಮಾಟಿಕ್ಸ್ ವಿದ್ಯಾರ್ಥಿನಿ), ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೈಲ್ ಬರ್ಗ್ ಪತ್ನಿ ಕಾತೆ ಕಾಪ್‌ಶಾ(ನಟಿ), ಮಾಧ್ಯಮ ದೊರೆ ಖ್ಯಾತಿಯ ರುಪರ್ಟ್ ಮುರ್ಡಾಕ್ ಪತ್ನಿ ವೆಂಡಿ ಡೆಂಗ್, ಉದ್ಯಮಿ ಮೈಕೆಲ್ ಡೆಲ್‌ರನ್ನು ವರಿಸಿರುವ ಸೂಸಾನ್ ಡೆಲ್(ಫ್ಯಾಶನ್ ವಿನ್ಯಾಸಗಾರ್ತಿ) ಇತರ ಪ್ರಭಾವಿ ಕೋಟ್ಯಾಧಿಪತಿ ಪತ್ನಿಯರಾಗಿದ್ದಾರೆ.
|