ಮಾಧವಪುರ ಬ್ಯಾಂಕ್ ಹಗರಣದಲ್ಲಿ ಭಾಗಿಯಾಗಿ 26 ಕೋಟಿ ರೂ.ಗಳ ಮೊತ್ತದ ಜಾಮೀನಿನ ಮೇಲೆ ಹೊರಬಂದ ಕೇತನ್ ಪಾರೇಕ್‌ಗೆ ಇನ್ನಷ್ಟು ಸಮಯಾವಕಾಶವನ್ನು ನೀಡಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.
26 ಕೋಟಿ ರೂ.ಗಳನ್ನು ಪಾವತಿಸುವುದಾಗಿ ಹೇಳಿ ಮೇ 1ರವರೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪಾರೇಕ್, ಜುಲೈ 15ರವರೆಗೆ ಪಾವತಿಸದೇ, ಜಾಮೀನಿಗಾಗಿ ನಿಗದಿಪಡಿಸಿದ್ದ 26 ಕೋಟಿ ರೂ.ಗಳನ್ನು ಪಾವತಿಸಲು ಇನ್ನಷ್ಟು ಸಮಯವನ್ನು ನೀಡಬೇಕು ಎಂದು ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಅಶೋಕ್ ಭಾನ್ ನೇತೃತ್ವದ ನ್ಯಾಯಪೀಠ ತಳ್ಳಿಹಾಕಿ ಜಾಮೀನನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ 396 ಕೋಟಿ.ರೂಗಳನ್ನು ಹಂತ ಹಂತವಾಗಿ ಪಾವತಿಸುವ ಷರತ್ತಿನ ಮೇಲೆ ಪಾರೇಕ್ ಅವರನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು.
1992ರಲ್ಲಿ ಮಾಧವಪುರ ಮರ್ಚಂಟೈಲ್ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ 888ಕೋಟಿ ರೂ.ಗಳ ಹಗರಣದಲ್ಲಿ ಕೇತನ್ ಪಾರೇಕ್ ಅವರನ್ನು ಪ್ರಮುಖ ಆರೋಪಿಯಾಗಿಸಿ ಪ್ರಕರಣ ದಾಖಲಿಸಲಾಗಿತ್ತು. ಇಲ್ಲಿಯವರೆಗೆ 370 ಕೋಟಿ ರೂ.ಗಳನ್ನು ಕೇತನ್ ಪಾವತಿಸಿದ್ದಾರೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
|