ಜೆಟ್ ಇಂಧನಗಳ ಹಾಗೂ ಅತ್ಯಾವಶ್ಯಕ ಸಾಮಾಗ್ರಿಗಳ ಬೆಲೆ ಏರಿಕೆಯಾಗುವುದರೊಂದಿಗೆ ಹಣದುಬ್ಬರದ ಏರಿಕೆ ಮುಂದುವರಿದಿದೆ. ಕಳೆದ ಜುಲೈ 5ರಂದು ಕೊನೆಗೊಂಡ ವಾರದ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರದ ಪ್ರತಿಶತವು ಇದೀಗ 11.91ಕ್ಕೆ ತಲುಪಿದೆ.
ಕಳೆದ ಜೂನ್ 28ರ ವಾರಾಂತ್ಯದಲ್ಲಿ ಹಣದುಬ್ಬರುವ 11.89 ಪ್ರತಿಶತವಾಗಿತ್ತು. ಇದೀಗ 11.91 ಪ್ರತಿಶತಕ್ಕೇರಿರುವ ಹಣದುಬ್ಬರವು 13 ವರ್ಷಗಳಲ್ಲಿ ದೇಶವು ಎದುರಿಸಿದ ಬೃಹತ್ ಪ್ರಮಾಣದ ಹಣದುಬ್ಬರವಾಗಿದೆ.
ಹಣದುಬ್ಬರವನ್ನು ನಿವಾರಿಸಲು ಕೇಂದ್ರವು ಸಾಕಷ್ಟು ಪರಿಹಾರ ಮಾರ್ಗಗಳನ್ನು ಕಂಡುಕೊಂಡರೂ ಅತ್ಯಾವಶ್ಯಕ ಸಾಮಾಗ್ರಿಗಳಾದ ಚಹಾ, ಹಾಲು, ಸಸ್ಯಜನ್ಯ ತೈಲ, ಉಪ್ಪು ಮತ್ತು ಧಾನ್ಯಗಳ ಬೆಲೆ ಗಗನಕ್ಕೇರಿದೆ.
ಅದೇ ವೇಳೆ ದೈನಂದಿನ ಬಳಕೆಯ ವಸ್ತುಗಳಾದ ಸಾಬೂನು ಬೆಲೆಯು 8 ಪ್ರತಿಶತದಷ್ಟು ದುಬಾರಿಯಾಗಿದ್ದು, ಡಿಟರ್ಜೆಂಟ್ 9 ಪ್ರತಿಶತ, ಕೇಶ ತೈಲದ ಬೆಲೆ ಒಂದು ಪ್ರತಿಶತವಾಗಿ ವರ್ಧನೆಯಾಗಿದೆ.
ಏತನ್ಮಧ್ಯೆ, ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆಯು ಒಂದು ಪ್ರತಿಶತ ಕಡಿಮೆಯಾದಾಗ ಜೆಟ್ ಇಂಧನ ಬೆಲೆಯು 5 ಪ್ರತಿಶತ ವರ್ಧನೆಯಾಗಿದೆ.
ದೇಶದಲ್ಲಿ ಬೆಲೆ ವರ್ಧನೆ ಮುಂದುವರಿಯುತ್ತಿದ್ದು, ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ಚಡಪಡಿಸುವ ಕೇಂದ್ರ ಸರಕಾರಕ್ಕೆ ಜುಲೈ 22ರಂದು ನಡೆಯಲಿರುವ ವಿಶ್ವಾಸ ಮತ ಕೋರಿಕೆಯ ಜೊತೆಗೆ ಹಣದುಬ್ಬರದ ಏರಿಕೆಯು ಹೆಚ್ಚಿನ ಆಘಾತವನ್ನುಂಟು ಮಾಡಿದೆ.
ಇತ್ತೀಚೆಗಷ್ಟೇ ಹಣಕಾಸು ಸಚಿವ ಪಿ. ಚಿದಂಬರಂ ಅವರು ಹಣದುಬ್ಬರವು ಮುಂದಿನ ವಾರಗಳಲ್ಲಿ ಎರಡಂಕಿಯಾಗಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಈಗಾಗಲೇ ಆರ್‌ಬಿಐ ಮತ್ತು ಸರಕಾರವು ಹಣದುಬ್ಬರ ನಿಯಂತ್ರಣಕ್ಕಾಗಿ ಸಾಕಷ್ಟು ಪರಿಹಾರೋಪಾಯಗಳನ್ನು ನೀಡಿದ್ದು, ಅತ್ಯಾವಶ್ಯಕವೆನಿಸಿದರೆ ಇನ್ನು ಮುಂದೆಯೂ ಮತ್ತಷ್ಟು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
|