ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆನ್‌ಲೈನ್ ಕಿರುಸಾಲ ನೀಡುವ 'ರಂಗ್‌ದೇ' Search similar articles
ಭಾರತದ ಪ್ರಪ್ರಥಮ ಆನ್‌ಲೈನ್ 'ಕಿರು ಸಾಲ ಪೂರೈಕೆ' ವೇದಿಕೆಯಾಗಿರುವ ರಂಗ್ ದೇ, ಅವಶ್ಯಕತೆಯುಳ್ಳವರು ಮತ್ತು ಹಣಕಾಸು ನೆರವು ಒದಗಿಸುವವರ ನಡುವೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಸಾಮಾಜಿಕ ಕಾಳಜಿಯಿಂದ ಬಂಡವಾಳ ಹೂಡಲಿಚ್ಛಿಸುವ ಮಂದಿ ಹಾಗೂ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಲು ಅಲ್ಪ ಪ್ರಮಾಣದ ಸಾಲದ ಅಗತ್ಯವಿರುವ ಮಂದಿ "ರಂಗ್‌ದೇ ಡಾಟ್ ಆರ್ಗ್" ಎಂಬ ಅಂತರ್ಜಾಲ ಸೈಟಿನಲ್ಲಿ ತಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳಬಹುದು.

ಭಾರತೀಯ ಗ್ರಾಮಗಳು, ಅರೆ-ಪಟ್ಟಣಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಿರು ಉದ್ಯಮದಲ್ಲಿ ತೊಡಗಿಕೊಳ್ಳಲಿಚ್ಛಿಸುವ ನೂರಾರು ಮಂದಿಗೆ ನೆರವು ನೀಡಿ ಆರ್ಥಿಕ ಸ್ಥಿರತೆ ಒದಗಿಸುವುದು ಈ ಲಾಭರಹಿತ ಸಂಘಟನೆಯ ಮುಖ್ಯ ಉದ್ದೇಶ. ಭಾರತದ ಮೊದಲ ಆನ್‌ಲೈನ್ ಮೈಕ್ರೋ ಲೆಂಡಿಂಗ್ ಸಂಸ್ಥೆಯು ರಾಮ್ ಎನ್.ಕೆ. ಮತ್ತು ಸ್ಮಿತಾ ರಾಮ್ ಅವರ ಕನಸಿನ ಕೂಸು.

ಸಾಲ ನೀಡಲು ಇಚ್ಛಿಸುವವರಿಗೆ 'ರಂಗ್‌ದೇ'ಯಲ್ಲಿ ಬಡ್ಡಿ ದೊರೆಯುವ ಲಾಭವಿದೆ ಅದಕ್ಕಿಂತ ಹೆಚ್ಚಾಗಿ, ಅವಶ್ಯಕತೆಯಿದ್ದವರಿಗೆ ಹಣಕಾಸು ನೆರವು ನೀಡಿ, ಅವರ ಕಾಲ ಮೇಲೆ ಅವರು ನಿಲ್ಲುವಂತೆ ನೆರವು ನೀಡಿದ ಆತ್ಮತೃಪ್ತಿಯಿದೆ. ಅಂತೆಯೇ, ಸಾಲ ಪಡೆಯುವವರು ಅಲ್ಪ ಬಡ್ಡಿ ನೀಡಿ ತಮ್ಮ ಕನಸಿನ ಯೋಜನೆಗಳನ್ನು ಉದ್ಧಾರ ಮಾಡಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಇದು ಸಾಲ ಕೊಡುವವರಿಗೆ ಮತ್ತು ಪಡೆಯುವವರ ನಡುವೆ ಸೇತು.

2008ರ ಗಣರಾಜ್ಯ ದಿನದಂದು ಅಂತರ್ಜಾಲ ಜಗತ್ತಿನಲ್ಲಿ ಮೂಡಿಬಂದಿರುವ ರಂಗ್‌ದೇ, ಸಾಮಾಜಿಕ ಉದ್ಯಮ ಕ್ಷೇತ್ರದಲ್ಲಿ ಹೊಸ ಅಲೆ ಮೂಡಿಸಿದೆ. ರಾಮ್ ಮತ್ತು ಸ್ಮಿತಾ ದಂಪತಿಗಳು ಬ್ರಿಟನ್‌ನಲ್ಲಿ ಉದ್ಯೋಗದಲ್ಲಿದ್ದವರು. ಇವರಿಬ್ಬರೂ ಹಿಂದಿನಿಂದಲೂ ವಿಭಿನ್ನ ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸ್ವಯಂಸೇವಕರಾಗಿ ತೊಡಗಿಸಿಕೊಂಡವರು. 'ಬಾಲಕಾರ್ಮಿಕತನ, ವಿಶೇಷ ಮಕ್ಕಳ ಕಾಳಜಿ, ರೈತರ ಬಿಕ್ಕಟ್ಟು... ಇವೆಲ್ಲವುಗಳ ಬಳಿಕ ನಾವು ಭಾರತದಲ್ಲಿ ಮೈಕ್ರೋಫೈನಾನ್ಸ್‌ಗೆ ಸಂಬಂಧಿಸಿ ಯಾವುದೇ ಆನ್‌ಲೈನ್ ಮಾಧ್ಯಮವಿಲ್ಲ ಎಂಬುದನ್ನು ಅರಿತುಕೊಂಡು, ಈ ಕಿರು ಸಾಲ ಕ್ಷೇತ್ರಕ್ಕಿಳಿದೆವು' ಎಂದಿದ್ದಾರೆ ರಾಮ್ ದಂಪತಿ.

ರಾಮ್ ಅವರು ಸತ್ಯಂ ಕಂಪ್ಯೂಟರ್ಸ್ ಸೇರಿದಂತೆ ಹಲವು ಕಂಪನಿಗಳಲ್ಲಿ ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿ ದುಡಿದಿದ್ದರು. ಸಮುದಾಯ ಚಟುವಟಿಕೆಗಳಲ್ಲಿನ ಸ್ಮಿತಾ ಅನುಭವ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ರಾಮ್ ಚಾಕಚಕ್ಯತೆ ಜತೆಗೂಡಿ, ಈ ಆನ್‌ಲೈನ್ ಮೈಕ್ರೋ ಫೈನಾನ್ಸ್ ಸಂಸ್ಥೆ ತಲೆ ಎತ್ತಿತು. 2007ರ ಸೆಪ್ಟೆಂಬರ್‌ನಲ್ಲಿ ವೃತ್ತಿಗೆ ವಿದಾಯ ಹಾಡಿದ ರಾಮ್, ರಂಗ್‌ದೇ ತಾಣದಲ್ಲಿ ತಮ್ಮನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡರು ಎನ್ನುತ್ತಾರೆ ಸ್ಮಿತಾ.

ಕ್ರಿಯೇಟಿವ್ ಪಾಲುದಾರರಾಗಿ ನಿಯತಿ ಟೆಕ್ನಾಲಜೀಸ್ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ನೆರವಾಯಿತು. "ರಂಗ್‌ದೇ" ಲಾಭರಹಿತವಾಗಿ ಕೆಲಸ ಮಾಡುತ್ತಿರುವುದರಿಂದ ನಿಯತಿ ಸಂಸ್ಥೆಯು ಶೇ.50ರಷ್ಟು ರಿಯಾಯಿತಿಯನ್ನೂ ನೀಡಿದರು. 2007ರ ಅಕ್ಟೋಬರ್ ತಿಂಗಳಲ್ಲಿ ನಡೆದ ಎರಡು ದಿನಗಳ ಮೈಕ್ರೋಫೈನಾನ್ಸ್ ಸಮಾವೇಶಕ್ಕೆ ರಾಮ್ ದಂಪತಿ ಭಾರತಕ್ಕೆ ಬಂದರು. ಅವರ ಪೋಸ್ಟರ್‌ಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಯಿತು. ಸಮಾವೇಶದಲ್ಲಿ ಪಾಲ್ಗೊಂಡವರಿಂದ ಈಕ್ವಿಟಿ ಕೊಡುಗೆಗಳು ಬಂದವು ಮತ್ತು ಹೂಡಿಕೆದಾರರು ರಂಗ್‌ದೇ ಬಗ್ಗೆ ಆಸಕ್ತಿ ತೋರಲಾರಂಭಿಸಿದರು.

ನಂತರ, ಐಸಿಐಸಿಐ ಪ್ರತಿಷ್ಠಾನವೂ ಇವರಿಗೆ ಸಹಾಯಹಸ್ತ ಚಾಚಿತು. ಇದುವರೆಗೆ 'ರಂಗ್‌ದೇ' ಮಹಾರಾಷ್ಟ್ರ ಮತ್ತು ತಮಿಳುನಾಡಿನ ಸುಮಾರು 56 ಸಾಲಗಾರರಿಗೆ ಸಾಲ ವಿತರಿಸಿದೆ. ಸುಮಾರು 38 ಮಂದಿ ಸಾಮಾಜಿಕ ಹೂಡಿಕೆದಾರರು ಅವರಿಗೆ ಬೆಂಬಲ ನೀಡಿದ್ದಾರೆ. ಇನ್ನೂ ಸಾಕಷ್ಟು ಯೋಜನೆಗಳು, ಒಡಂಬಡಿಕೆಗಳು ಪ್ರಗತಿ ಹಂತದಲ್ಲಿವೆ.
ಮತ್ತಷ್ಟು
ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ
ಭಾರತೀಯ ಮಾರುಕಟ್ಟೆಗೆ ಟೊಯೋಟಾ ಪ್ರಿಯೂಸ್
ಜಾಗತಿಕ ತೈಲ ಬೆಲೆಯಲ್ಲಿ ಇಳಿಕೆ
ಭಾರತದ ಮೇಲೆ ಅಮೆರಿಕ ಆರ್ಥಿಕತೆ ಪರಿಣಾಮ: ರತನ್
ಗ್ರಾಮೀಣ ವ್ಯವಹಾರ ಕೇಂದ್ರಗಳಿಗೆ ಚಿಂತನೆ
ಹಣದುಬ್ಬರ ಶೇ.8ಕ್ಕೆ ಇಳಿಯಲಿದೆ: ರಂಗರಾಜನ್