ಸಿಂಗೂರಿನಿಂದ ಟಾಟಾ ಮೋಟಾರ್ಸ್‌ನ ಸಣ್ಣಕಾರು ಯೋಜನೆಯು ಎತ್ತಂಗಡಿಯಾಗಲಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿರುವ ಪಶ್ಚಿಮ ಬಂಗಾಳ ಸರಕಾರ, ನವರಾತ್ರಿಯ ಮೊದಲು ನ್ಯಾನೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಯಾವುದೇ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಮಾಧ್ಯಮಗಳಲ್ಲಿ ವರದಿಯಾಗಿರುವ ವಿಚಾರಗಳಿಗೆ ಮಾಧ್ಯಮಗಳೇ ಹೊಣೆ. ಸಿಂಗೂರಿನಿಂದ ಸಣ್ಣಕಾರು ಯೋಜನೆಯನ್ನು ತೆಗದುಹಾಕುವ ಕುರಿತಾಗಿ ಟಾಟಾ ಮೋಟಾರ್ಸ್ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ ಎಂದು ಉದ್ಯಮ ಸಚಿವ ನಿರುಪಂ ಸೇನ್ ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ನೇತೃತ್ವದ ಕೃಷಿ ಭೂಮಿ ಉಳಿಸಿ ಸಮಿತಿಯ ನಿರಂತರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಸಿಂಗೂರಿನಲ್ಲಿ ತನ್ನ ಯೋಜನೆಯನ್ನು ಸ್ಥಗಿತಗೊಳಿಸುವ ಪ್ರಸ್ತಾಪವನ್ನು ಟಾಟಾ ಮೋಟಾರ್ಸ್ ಸರಕಾರದ ಮುಂದಿಟ್ಟಿದೆ ಎಂಬುದಾಗಿ ಬೆಂಗಾಲಿ ಡೈಲಿ ಪತ್ರಿಕೆಯು ವರದಿ ಮಾಡಿತ್ತು.
ಟಾಟಾ ಮೋಟಾರ್ಸ್ ಆಡಳಿತ ನಿರ್ದೇಶತ ರವಿಕಾಂತ್ ಅವರು ಕಳೆದ ತಿಂಗಳು ಸಿಂಗೂರಿಗೆ ಭೇಟಿ ನೀಡಿದ್ದ ವೇಳೆ ಶೇ.75ರಷ್ಟು ಕಾರ್ಯವು ಪೂರ್ಣಗೊಂಡಿದ್ದು, ನಂತರ ಅನೇಕ ಕಾರ್ಯಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಿಗದಿತ ಸಮಯದಲ್ಲಿ ನ್ಯಾನೋ ಬಿಡುಗಡೆಯ ವಿಶ್ವಾಸ ವ್ಯಕ್ತಪಡಿಸಿದ ಸೇನ್, ನ್ಯಾನೋ ದುರ್ಗಾಪೂಜೆಯ ಮೊದಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಭರವಸೆಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
|