ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದ ಟಚ್‌ಸ್ಕ್ರೀನ್ ಆಪಲ್ ಐಫೋನ್, ಭಾರ್ತಿ ಏರ್‌ಟೆಲ್ ಮುಖಾಂತರ ಆಗಸ್ಟ್ 21ರಿಂದ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ.
ನೋಕಿಯಾ, ಸ್ಯಾಮ್‌ಸಂಗ್ ಮತ್ತು ಇತರ ಮೊಬೈಲ್ ಕಂಪನಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಆಪಲ್ ಐಫೋನ್‌ನ್ನು ಆಗಸ್ಟ್ 22ರಿಂದ ಏರ್‍ಟೆಲ್ ಗ್ರಾಹಕರು ಏರ್‌ಟೆಲ್ ಕೇಂದ್ರಗಳಿಂದ ಖರೀದಿಸಬಹುದಾಗಿದೆ ಎಂದು ಕಂಪನಿ ಹೇಳಿಕೆ ತಿಳಿಸಿದೆ.
ಉನ್ನತ ತಂತ್ರಜ್ಞಾನವನ್ನು ಹೊಂದಿರುವ ಐಫೋನ್, ಎಲ್ಲಾ 3ಜಿ ಸೌಲಭ್ಯಗಳನ್ನು ಒಳಗೊಂಡಿದೆ. ಅಲ್ಲದೆ, ಇತರ ಮೊಬೈಲ್‌ಗಳಿಗಿಂತ ಎರಡು ಪಟ್ಟು ಶೀಘ್ರ ನಿರ್ವಹಣೆಯನ್ನು ಮಾಡುತ್ತದೆ. ಇದರೊಂದಿಗೆ, ಜಿಪಿಎಸ್ ವಿಧಾನವನ್ನು ಇದು ಹೊಂದಿದೆ ಎಂದು ಬಾರ್ತಿ ಏರ್‌ಟೆಲ್ ಮೊಬೈಲ್ ಸರ್ವೀಸ್‌ನ ಅಧ್ಯಕ್ಷ ಸಂಜಯ್ ಕಪೂರ್ ತಿಳಿಸಿದ್ದಾರೆ.
ದೇಶದಲ್ಲಿ ಐಫೋನ್ ಬಿಡುಗಡೆ ಮಾಡಲು ಅಮೆರಿಕ ಮೂಲದ ಆಪಲ್, ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್ ಮತ್ತು ವಡಾಫೋನ್‌ನೊಂದಿಗೆ ಕೈಜೋಡಿಸಿದೆ.
ಅದಾಗ್ಯೂ, ಐಫೋನ್ ಬೆಲೆಯನ್ನು ಬಹಿರಂಗಗೊಳಿಸಲು ಭಾರ್ತಿ ಏರ್‌ಟೆಲ್ ಅಧಿಕಾರಿಗಳು ನಿರಾಕರಿಸಿದ್ದಾರೆ.
|