ಸಮಸ್ಯೆರಹಿತ ವಾಹನ ಚಾಲನೆಯ ಅನುಭವವನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ಫೋರ್ಡ್ ಇಂಡಿಯಾ, ಕೋಲ್ಕತ್ತಾ, ಅಹಮದಾಬಾದ್, ಕೊಯಂಬತ್ತೂರು ಮತ್ತು ಜೈಪುರಗಳಲ್ಲಿ ರಸ್ತೆಬದಿ ಸೇವೆಯನ್ನು(ಆರ್ಎಸ್ಎ) ಪ್ರಾರಂಭಿಸುವುದಾಗಿ ಘೋಷಿಸಿದೆ.
ರಾಷ್ಟ್ರೀಯ ಶುಲ್ಕರಹಿತ ದೂರವಾಣಿ ಮೂಲಕ ಲಭ್ಯವಾಗಲಿರುವ ಈ ಸೇವೆಯು, ಮೆಕ್ಯಾನಿಕ್ ಸೇವೆ, ಸಣ್ಣ ದುರಸ್ತಿ, ಅಗತ್ಯವಿದ್ದಲ್ಲಿ ಸೇವಾ ಕೇಂದ್ರಗಳಿಗೆ ಕಾರಿನ ಸಾಗಣೆ, ಇಂಧನ ವಿತರಣೆ, ಬ್ಯಾಟರಿಗಳ ಜಂಪ್‌ಸ್ಟಾರ್ಟ್ ಮುಂತಾದ ಅನೇಕ ರಸ್ತೆಬದಿ ಸೇವೆಗಳನ್ನು ಗ್ರಾಹಕರಿಗೆ ನೀಡಲಿದೆ.
ನವೆಂಬರ್ 2007ರಲ್ಲಿ ಪ್ರಾರಂಭಗೊಂಡ ಈ ಯೋಜನೆಯನ್ನು ಪ್ರಾರಂಭದಲ್ಲಿ ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಪೂನಾದಲ್ಲಿ ಪ್ರಾರಂಭಿಸಲಾಗಿತ್ತು. ಇದಾದ ಐದು ತಿಂಗಳ ನಂತರ, ಈ ಸೇವೆಯನ್ನು ಹೈದರಾಬಾದ್, ಕೊಚ್ಚಿ, ಲುಧಿಯಾನಾ ಮತ್ತು ಚಂಡೀಗಢಕ್ಕೆ ವೃದ್ಧಿಸಲಾಯಿತು. ಮೂರನೇ ಹಂತದಲ್ಲಿ, ಕೋಲ್ಕತ್ತಾ, ಅಹಮದಾಬಾದ್, ಜೈಪುರ ಮತ್ತು ಕೊಯಂಬತ್ತೂರುಗಳಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸುತ್ತಿದ್ದು, ಈ ಮೂಲಕ ದೇಶದಲ್ಲಿ 13 ನಗರಗಳಲ್ಲಿ ರಸ್ತೆಬದಿ ಸೇವೆಯನ್ನು ನೀಡುವ ಹೆಗ್ಗಳಿಕೆಗೆ ಫೋರ್ಡ್ ಪಾತ್ರವಾಗಲಿದೆ.
ಫೋರ್ಡ್ ಇಂಡಿಯಾದ ಉತ್ಪನ್ನಗಳ ಗುಣಮಟ್ಟದ ಕುರಿತಾಗಿ ಈಗಾಗಲೇ ಫೋರ್ಡ್ ತನ್ನ ಗ್ರಾಹಕರಿಗೆ ಭರವಸೆಯನ್ನು ನೀಡುತ್ತಿದ್ದು, ಕೋಲ್ಕತ್ತಾ, ಅಹಮದಾಬಾದ್, ಜೈಪುರ, ಕೊಯಂಬತ್ತೂರ್ ಮುಂತಾದ ನಗರಗಳಲ್ಲಿ ರಸ್ತೆಬದಿ ಸೇವೆಯನ್ನು ಪ್ರಾರಂಭಿಸುವ ಮೂಲಕ ಫೋರ್ಡ್ ಕಾರುಗಳ ಮಾಲೀಕರು ಇನ್ನಷ್ಟು ವಿಶ್ವಾಸವನ್ನು ಕಂಪನಿಯ ಮೇಲೆ ಹೊಂದಬಹುದು. ಅಲ್ಲದೆ, ಉತ್ತಮ ಸೇವೆಗಾಗಿ ಶುಲ್ಕರಹಿತ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಫೋರ್ಡ್ ಇಂಡಿಯಾದ ಮಾರುಕಟ್ಟೆ, ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ನಿಗೆಲ್ ವಾರ್ಕ್ ತಿಳಿಸಿದ್ದಾರೆ.
ಈಗಾಗಲೇ ಈ ಸೇವೆಯನ್ನು ಪ್ರಾರಂಭಿಸಿರುವ ನಗರಗಳಲ್ಲಿ ಸೇವೆಯ ಕುರಿತಾದ ಪ್ರತಿಕ್ರಿಯೆಯ ಬಗ್ಗೆ ಮಾತನಾಡಿದ ನಿಗೆಲ್, ಮೊದಲ ಎರಡು ಹಂತದಲ್ಲಿ ಫೋರ್ಡ್ ಆರ್ಎಸ್ಎ ಕಾರ್ಯಕ್ರಮದಲ್ಲಿ ಉನ್ನತ ಯಶಸ್ಸನ್ನು ಕಂಪನಿಯು ಸಾಧಿಸಿದೆ. ಗ್ರಾಹಕರ ಪ್ರತಿಕ್ರಿಯೆಯು ಧನಾತ್ಮಕವಾಗಿದೆ ಎಂದು ಹೇಳಿದ್ದಾರೆ.
|