ಗ್ರಾಮೀಣ ಪ್ರದೇಶದ ಜನರನ್ನು ತನ್ನತ್ತ ಸಳೆಯುವ ನಿಟ್ಟಿನಲ್ಲಿ ಪ್ರಮುಖ ಮೊಬೈಲ್ ಸೇವಾ ಸಂಸ್ಥೆ ಭಾರ್ತಿ ಏರ್‌ಟೆಲ್, ಬುಧವಾರ 'ಗ್ರಾಮೀಣ ಮೊಬೈಲ್ ಪುರಚಿ ' ಎಂಬ ಪ್ರಚಾರ ಆದೋಲನವನ್ನು ಪ್ರಾರಂಭಿಸಿದೆ.
ಜನವರಿ ತಿಂಗಳಲ್ಲಿ ನಡೆಸಿದ ಪ್ರಾಯೋಗಿಕ ಅಧ್ಯಯನದ ಬಳಿಕ, ತಮಿಳುನಾಡಿನಲ್ಲಿ ಅಧಿಕೃತ ಪ್ರಚಾರ ಆಂದೋಲನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಮಿಳುನಾಡು ಗ್ರಾಮೀಣ ಮೊಬೈಲ್ ಪುರಚಿಯನ್ನು ಉದ್ಘಾಟಿಸಿದ ತಮಿಳು ನಾಡು ಪ್ರದೇಶದ ಭಾರ್ತಿ ಏರ್‌ಟೆಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್ ರಾಜಗೋಪಾಲ್ ತಿಳಿಸಿದ್ದಾರೆ.
ರಾಷ್ಟ್ರೀಯ ಮಟ್ಟದ 14 ರಾಜ್ಯಗಳಲ್ಲಿ ಪ್ರಾರಂಭಿಸಲಾಗುವ ಈ ಆಂದೋಲನವು ಗ್ರಾಮೀಣ ಪ್ರದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ವೃದ್ಧಿಸುವ ಗುರಿಯನ್ನು ಹೊಂದಿದೆ ಎಂದು ಚೆನ್ನೈನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
ಆಂಧ್ರಪ್ರದೇಶ, ಉತ್ತರಪ್ರದೇಶ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಲ, ಚಂಡೀಗಢ ಮುಂತಾದ ರಾಜ್ಯಗಳಲ್ಲಿ ಈ ಆಂದೋಲನವನ್ನು ನಡೆಸಲಾಗುವುದು ಎಂದು ರಾಜಗೋಪಾಲ್ ತಿಳಿಸಿದ್ದಾರೆ.
ಇದಕ್ಕಾಗಿ ಏರ್‌ಟೆಲ್ ಸಂಸ್ಥೆಯು ಭಾರತೀಯ ರೈತ ರಸಗೊಬ್ಬರ ಸಹಕಾರ ಸಂಸ್ಥೆ(ಐಎಫ್ಎಫ್‌ಸಿಒ)ಯೊಂದಿಗೆ ಕೈಜೋಡಿಸಿದ್ದು, ಇಫ್ಕೋದ ಕಿಸಾನ್ ಸಂಚಾರ್ ಲಿ.ನ ಅಡಿಯಲ್ಲಿ ಈ ಆಂದೋಲನವನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ ಎಂದು ಅವರು ತಿಳಿಸಿದರು.
|