ಉತ್ತರ ಪ್ರದೇಶದ ದೊಮಾರಿಯಾಂಗಜ್‌ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಶಾಖೆಯಲ್ಲಿ ಈ ತಿಂಗಳ ಆದಿಯಲ್ಲಿ ಬೆಳಕಿಗೆ ಬಂದಿದ್ದ ಖೋಟಾನೋಟು ಹಗರಣದ ತನಿಖೆಯನ್ನು ವಿಶೇಷ ತನಿಖಾ ತಂಡವು(ಎಸ್ಐಟಿ) ಸದ್ಯದಲ್ಲಿಯೇ ಪ್ರಾರಂಭಿಸಲಿದೆ.
ಖೋಟಾ ನೋಟು ಹಗರಣದ ತನಿಖೆಯನ್ನು ರಾಜ್ಯ ಸರಕಾರವು ಗುರುವಾರ ಎಸ್ಐಟಿಗೆ ಒಪ್ಪಿಸಿದೆ.
ಬ್ಯಾಂಕ್‌ನ್ನು ಸೋಮವಾರ ಭಾರತೀಯ ರಿಸರ್ವ್ ಬ್ಯಾಂಕ್ ದಾಳಿ ನಡೆಸಿದ ವೇಳೆ, ಸುಮಾರು ಏಳು ದಶಲಕ್ಷ ರೂಪಾಯಿ ಮೌಲ್ಯದ ಖೋಟಾನೋಟನ್ನು ವಶಪಡಿಸಿಕೊಂಡಿತ್ತು. ನೋಟುಗಳ ಸ್ಕ್ಯಾನಿಂಗ್ ಕಾರ್ಯವು ಇನ್ನೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಂಗಡಣಾ ಕಾರ್ಯ ಪೂರ್ಣಗೊಂಡ ಬಳಿಕ ಒಟ್ಟು ಖೋಟಾನೋಟಿನ ಮೌಲ್ಯವು 20 ದಶಲಕ್ಷ ರೂಪಾಯಿಗಳಾಗುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಬ್ಯಾಂಕಿನ ಕ್ಯಾಶಿಯರ್ ಸುಧಾಕರ್ ತ್ರಿಪಾಠಿ ಲಂಬಾತ ನಕಲಿ ನೋಟುಗಳೊಂದಿಗೆ ಅಸಲಿ ನೋಟುಗಳನ್ನು ವಿನಿಮಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.
ಎಸ್ಐಟಿಯು ಇಂತಹ ಪ್ರಕರಣಗಳಲ್ಲಿ ಪರಿಣತಿ ಹೊಂದಿರುವ ಕಾರಣ ಪ್ರಕರಣದ ತನಿಖೆಯನ್ನು ಅದಕ್ಕೊಪ್ಪಿಸುವುದಾಗಿ ಗೃಹ ಇಲಾಖಾ ಪ್ರಧಾನ ಕಾರ್ಯದರ್ಶಿ ಮಹೇಶ್ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಖೋಟಾನೋಟು ಹಗರಣದ ಕುರಿತಾಗಿ ಕೆಲವು ದಿನಗಳವರೆಗೆ ಪ್ರಾರಂಭಿಕ ತನಿಖೆಯನ್ನು ನಡೆಸಲಾಗುವುದು. ನಂತರ, ವಿಶೇಷ ಕಾರ್ಯ ಪಡೆ(ಎಸ್‌ಟಿಎಫ್)ನೊಂದಿಗೆ ಸಹಕರಿಸಲಾಗುವುದು. ಬೃಹತ್ ತನಿಖಾ ತಂಡವು ಸೋಮವಾರದಂದು ದೊಮಾರಿಯಾಂಗಜ್‌ಗೆ ತಲುಪಲಿದೆ ಎಂದು ಎಸ್ಐಟಿ ತಂಡದ ಸದಸ್ಯರು ತಿಳಿಸಿದ್ದಾರೆ.
ಏತನ್ಮಧ್ಯೆ, ಖೋಟಾನೋಟಿನ ಕುರಿತಾಗಿ ಎಚ್ಚರಿಕೆಯಿಂದಿರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲಾ 1,350 ಶಾಖೆಗಳಿಗೂ ಸೂಚನೆ ನೀಡಿದ್ದು, ಕರೆನ್ಸಿ ವಿನಿಮಯದ ವೇಳೆ ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿದೆ.
|