ಸಿಂಗೂರು ಕಾರ್ಖಾನೆ ವಿವಾದದ ಕುರಿತಂತೆ ಟಾಟಾ ಮೋಟಾರ್ಸ್‌ನೊಂದಿಗೆ ಮಾತುಕತೆ ನಡೆಸಲು ತಾನು ಸಿದ್ಧ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ತಿಳಿಸಿರುವುದರೊಂದಿಗೆ, ಟಾಟಾವು ತೃಣಮೂಲ ಕಾಂಗ್ರೆಸ್‌ನೊಂದಿಗೆ ಮಾತುಕತೆಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ.
ಒಟ್ಟು 997 ಎಕರೆ ಜಮೀನಿನಲ್ಲಿ 400 ಎಕರೆ ಜಮೀನು ರೈತರಿಗೆ ಹಿಂತಿರುಗಿಸಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದು, ಈ ಕುರಿತಾಗಿ ತಾನು ಮಾತುಕತೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
"ಸಮಸ್ಯೆಯ ಪರಿಹಾರಕ್ಕಾಗಿ ತನ್ನೊಂದಿಗೆ ಯಾರಾದರೂ ಮಾತನಾಡಲು ಬಯಸಿದಲ್ಲಿ ಹಾನಿ ಏನಿದೆ? ರಾಜಕೀಯವಾಗಿ ನಾವು ಯಾರೊಂದಿಗೂ ಮಾತನಾಡಬಹುದಾಗಿದೆ. ಇದು ಸೌಜನ್ಯದ ವಿಚಾರ. ಆದರೆ ನಾವು ರೈತರ ಹಿತಾಸಕ್ತಿಯನ್ನು ಗಮನಿಸಬೇಕಾಗಿದೆ" ಎಂದು ಅವರು ಹೇಳಿದ್ದಾರೆ.
ಟಾಟಾಮೋಟಾರ್ಸ್‌ನೊಂದಿಗೆ ಮಾತುಕತೆ ನಡೆಸಲು ಮಮತಾ ಬಯಸಿದ್ದು, ಇದು ಮಮತಾ ಬ್ಯಾನರ್ಜಿ ಮತ್ತು ಟಾಟಾ ಮೋಟಾರ್ಸ್ ನಡುವಿನ ವಿಚಾರವಾಗಿದೆ. ಮಮತಾ ಅವರೊಂದಿಗೆ ಮಾತುಕತೆ ನಡೆಸಲು ಟಾಟಾ ಮೋಟಾರ್ಸ್ ಒಪ್ಪಿದರೆ ಸರಕಾರದ್ದೇನು ಅಭ್ಯಂತರವಿಲ್ಲ ಎಂದು ಪಶ್ಚಿಮ ಬಂಗಾಲ ಉದ್ಯಮ ಸಚಿವ ನಿರುಪಂ ಸೇನ್ ತಿಳಿಸಿದ್ದಾರೆ.
ನ್ಯಾನೋ ಸ್ಥಾವರದ ಮೇಲೆ ಆಗಸ್ಟ್ 24ರಿಂದ ತೃಣಮೂಲ ಕಾಂಗ್ರೆಸ್ ಅನಿರ್ದಿಷ್ಟಾವಧಿ ಮುತ್ತಿಗೆ ಹಾಕಲು ಯೋಜಿಸಿದ್ದು, ಇದಕ್ಕೆ ಮುಂಚಿತವಾಗಿ ಟಾಟಾದ ಪ್ರತಿಕ್ರಿಯೆಯನ್ನು ಮಮತಾ ಬ್ಯಾನರ್ಜಿ ಮತ್ತು ಸಿಪಿಎಂ ನಿರೀಕ್ಷಿಸುತ್ತಿದೆ.
|