ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪ್ರಮುಖ ಬಡ್ಡಿ ದರಗಳನ್ನು ಶೇ.13.75ಕ್ಕೆ ಏರಿಸಿದ್ದು, ಇದು ಮಂಗಳವಾರದಿಂದ ಜಾರಿಗೆ ಬರಲಿದೆ.
ಇದರೊಂದಿಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಠೇವಣಿ ದರಗಳನ್ನೂ ಶೇ.1.25-0.75ರಷ್ಟು ಏರಿಕೆಗೊಳಿಸಿದೆ ಎಂದು ಎಸ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.
"ಇಷ್ಟು ಏರಿಕೆಯ ನಂತರವೂ, ಎಸ್‌ಬಿಐಯ ಬಿಪಿಎಲ್ಆರ್ ದರವು ಅತ್ಯಂತ ಕನಿಷ್ಠ ದರವಾಗಿದೆ. ಇದು ಗ್ರಾಹಕರನ್ನು ಆಕರ್ಷಿಸಲು ಸಹಕಾರವಾಗುವ ನಿರೀಕ್ಷೆ ಇದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ನೂತನ ಬಿಪಿಎಲ್ಆರ್ ದರದ ಏರಿಕೆಯು 30 ಲಕ್ಷ ರೂಪಾಯಿವರೆಗಿನ ಗೃಹ ಸಾಲದ ಮೇಲೆ, ಈಗಾಗಲೇ ಇರುವ ಆಟೋ ಸಾಲ ಮತ್ತು ಶೈಕ್ಷಣಿಕ ಸಾಲಗಳಿಗೆ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬಿಪಿಎಲ್ಆರ್ ದರ ಏರಿಕೆಯೊಂದಿಗೆ, ಎಸ್‌ಬಿಐ ವಿವಿಧ ಠೇವಣಿ ದರಗಳನ್ನೂ ಏರಿಸಿದ್ದು, ಹಿರಿಯ ನಾಗರಿಕರ ಠೇವಣಿ ದರವನ್ನು ಶೇ.0.5-0.75ಕ್ಕೆ ಏರಿಸಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಜಮ್ಮು & ಕಾಶ್ಮೀರ್ ಬ್ಯಾಂಕ್, ಐಡಿಬಿಐ ಬ್ಯಾಂಕ್ , ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ರಾಜಸ್ಥಾನ್, ಯೆಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಅಲಹಬಾದ್ ಬ್ಯಾಂಕ್ ಮತ್ತು ಐಸಿಐಸಿಐ ಈಗಾಗಲೇ ಸಾಲಬಡ್ಡಿದರಗಳನ್ನು ಏರಿಕೆಗೊಳಿಸಿವೆ.
|