ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಕಬ್ಬಿಣದ ಅದಿರು ಮತ್ತು ಕಲ್ಲಿದ್ದಲು ಬೆಲೆಯ ಮಟ್ಟವನ್ನು ಸ್ಟೀಲ್ ಬೆಲೆಯು ಆಧರಿಸಿದೆ ಎಂದು ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ತಿಳಿಸಿದ್ದಾರೆ.
ಕಬ್ಬಿಣದ ಅದಿರು ಮತ್ತು ಕಲ್ಲಿದ್ದಲು ಬೆಲೆ ಹೆಚ್ಚಳದಿಂದಾಗಿ ಜಾಗತಿಕ ಸ್ಟೀಲ್ ಉದ್ಯಮವು ಒತ್ತಡವನ್ನು ಎದುರಿಸುತ್ತಿದೆ ಎಂದು ಟಾಟಾ ಸ್ಟೀಲ್‌ನ 2007-08ರ ವಾರ್ಷಿಕ ವರದಿಯಲ್ಲಿ ಕಂಪನಿ ಅಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.
ಸ್ಟೀಲ್ ನಿರ್ಮಾಣದ ಎರಡು ಪ್ರಮುಖ ಕಚ್ಚಾವಸ್ತುಗಳಾದ ಕಬ್ಬಿಣದ ಅದಿರು ಮತ್ತು ಕಲ್ಲಿದ್ದಲು ಬೆಲೆಯು ಕಳೆದ ಕೆಲವು ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಶೇ.85ರಿಂದ ಶೇ.300ರಷ್ಟು ಏರಿಕೆಗೊಂಡಿದೆ. ಇದು ಸ್ಟೀಲ್ ಬೆಲೆ ಹೆಚ್ಚಳಕ್ಕೆ ಪ್ರಚೋದನೆ ನೀಡಿವೆ ಎಂದು ಟಾಟಾ ಅಭಿಪ್ರಾಯಪಟ್ಟಿದ್ದಾರೆ.
ಪ್ರಮುಖ ಅಂತಾರಾಷ್ಟ್ರೀಯ ಕಂಪನಿಗಳು ಶೇ.70ರಷ್ಟು ಜಾಗತಿಕ ಕಬ್ಬಿಣದ ಅದಿರು ಮತ್ತು ಮಿನರಲ್ ಸಂಪನ್ಮೂಲಗಳನ್ನು ಹೊಂದಿದ್ದರೆ, ಹತ್ತು ಪ್ರಮುಖ ಸ್ಟೀಲ್ ಉತ್ಪಾದಕರು ಒಟ್ಟು ಜಾಗತಿಕ ಸ್ಟೀಲ್ ಉತ್ಪಾದನೆಯ ಶೇ.28ರಷ್ಟನ್ನು ಒಳಗೊಂಡಿದೆ ಎಂದು ಟಾಟಾ ಹೇಳಿದ್ದಾರೆ.
ಕಂಪನಿಯು ಲಂಡನ್ ಮತ್ತು ನೆದರ್ಲಾಂಡ್‌ನಲ್ಲಿ ಕೋರಸ್ ಕಾರ್ಯನಿರ್ವಹಣೆಗಾಗಿ ಕಬ್ಬಿಣದ ಅದಿರು ಮತ್ತು ಕಲ್ಲಿದ್ದಲಿನ ಸಾಕಷ್ಟು ಲಭ್ಯತೆಗಾಗಿ ಗಣಿಗಾರಿಕಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿದೆ ಎಂದು ಟಾಟಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
|