ಭಾರತದಿಂದ ಇಂಧನ ಆಮದು ಮಾಡಲು ಕಳೆದ ತಿಂಗಳು ಇಸ್ಲಾಮಾಬಾಗ್ ಒಪ್ಪಿಗೆ ನೀಡಿದ ನಂತರ, ರಿಲಯನ್ಸ್ ಇಂಡಸ್ಟ್ರೀಸ್ , ಗುಜರಾತಿನ ಜಾಮ್‌ನಗರದ ಶುದ್ಧೀಕರಣ ಘಟಕದಿಂದ ಪಾಕಿಸ್ತಾನಕ್ಕೆ ಡೀಸೆಲ್ ರಫ್ತು ಮಾಡುವತ್ತ ಚಿಂತನೆ ನಡೆಸಿದೆ.
ಡೀಸೆಲ್ ಮತ್ತು ಇಂಧನ ತೈಲ ಸೇರಿದಂತೆ, ಭಾರತದಿಂದ ಹೆಚ್ಚಿನ ಉತ್ಪನ್ನಗಳ ಆಮದಿಗೆ ಅನುಮೋದನೆ ನೀಡುವ ಮೂಲಕ, ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವುದಾಗಿ ಪಾಕಿಸ್ತಾನ ಜುಲೈ ತಿಂಗಳಲ್ಲಿ ಘೋಷಿಸಿತ್ತು.
ತನ್ನ ದೇಶೀಯ ಇಂಧನ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ವರ್ಷಕ್ಕೆ 7-8 ಮಿಲಿಯನ್ ಟನ್ ಡೀಸೆಲ್ ಆಮದು ಮಾಡುವ ಪಾಕಿಸ್ತಾನಕ್ಕೆ ಪ್ರವೇಶ ಪಡೆಯಲು ರಿಲಯನ್ಸ್ ಪ್ರಯತ್ನಿಸುತ್ತಿದ್ದು, ಕಳೆದ ತಿಂಗಳು ಭಾರತದಿಂದ ಇಂಧನ ಆಮದಿಗೆ ಪಾಕ್ ಸರಕಾರ ನೀಡಿದ ಅನುಮೋದನೆಯು ಕಂಪನಿಯ ಪ್ರಯತ್ನದ ಹಾದಿಯನ್ನು ಸುಲಭವಾಗಿಸಿದೆ.
ನೆರೆಯ ದೇಶದ ಪಾಕಿಸ್ತಾನಕ್ಕೆ ಅಗ್ಗದ ದರದಲ್ಲಿ ಡೀಸೆಲ್ ಪೂರೈಸಲು ರಿಲಯನ್ಸ್ ಯೋಜಿಸಿದ್ದರೂ, ಪಾಕಿಸ್ತಾನವು ಕುವೈಟ್‌ನಂತಹ ರಾಷ್ಟ್ರಗಳಿಂದ ಅಗ್ಗ ಮತ್ತು ದರಕಡಿತದ ಬೆಲೆಯಲ್ಲಿ ಇಂಧನವನ್ನು ಪಡೆಯುತ್ತಿರುವುದರಿಂದ ರಿಲಯನ್ಸ್ ಅದಕ್ಕಿಂತಲೂ ಉತ್ತಮ ಬೆಲೆಯಲ್ಲಿ ಡೀಸೆಲ್ ರಫ್ತು ಮಾಡಬೇಕಾಗುತ್ತದೆ.
ಸಾಗಾಣಿಕಾ ವೆಚ್ಚವನ್ನು ಹೋಲಿಸಿದರೆ, ಭಾರತದಿಂದ ಡೀಸೆಲ್ ಆಮದು ಮಾಡುವುದ ಪಾಕಿಸ್ತಾನಕ್ಕೆ ಅಗ್ಗವಾಗಲಿದೆ. ಮೂಲಗಳ ಪ್ರಕಾರ, ಕರಾಚಿ ಬಂದರಿನಿಂದ ಜಾಮ್‌ನಗರಕ್ಕೆ ಪ್ರಯಾಣ ಅವಧಿಯು ಕೇವಲ ಒಂದು ದಿನ ಮಾತ್ರ. ಆದರೆ, ಕುವೈಟ್‌ನಿಂದ ಕರಾಚಿಗೆ ಮೂರು ದಿನಗಳ ಕಾಲ ತಗುಲುತ್ತದೆ. ಆದರೆ, ಕುವೈಟ್ ನೀಡುವ ದರ ಕಡಿತದಿಂದಾಗಿ, ಪಾಕಿಸ್ತಾನವು ಗಲ್ಫ್ ರಾಷ್ಟ್ರದಿಂದ ಡೀಸೆಲ್ ಆಮದು ಮಾಡಲು ಆಸಕ್ತಿ ತೋರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ
|